ಪಾಕಿಸ್ತಾನ,ಭಾರತ ಉತ್ತಮ ನೆರೆಹೊರೆಯವರಂತೆ ಜೀವಿಸಬೇಕು: ನವಾಜ್ ಷರೀಫ್

ಶನಿವಾರ, 10 ಅಕ್ಟೋಬರ್ 2015 (19:38 IST)
ಭಾರತದ ಜತೆ ಪದೇ ಪದೇ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಪಾಕಿಸ್ತಾನವು ಕಾಶ್ಮೀರ ವಿವಾದ ಬಗೆಹರಿಸುವುದಕ್ಕಾಗಿ ಉಭಯ ರಾಷ್ಟ್ರಗಳು ನೆರೆಹೊರೆಯವರಂತೆ ಜೀವಿಸಬೇಕು ಎಂದು ಹೇಳುತ್ತಿದೆ.   ''ಪಾಕಿಸ್ತಾನ ಮತ್ತು ಭಾರತ ಉತ್ತಮ ನೆರೆಹೊರೆಯವರಂತೆ ಬದುಕಬೇಕು. ಕಾಶ್ಮೀರ ಸೇರಿದಂತೆ ಎಲ್ಲಾ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು'' ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಶನಿವಾರ ಬುದ್ಧಿವಾದ ಹೇಳಿದರು.
 
 ನಾನು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಧೈರ್ಯದಿಂದ ಎತ್ತಿದ್ದು ಹೃದಯಬಿಚ್ಚಿ ಮಾತನಾಡಿದ್ದೇನೆ. ಪಾಕ್ ಜತೆ ಬಾಂಧವ್ಯ ಸುಧಾರಣೆ ಮಾಡಿಕೊಳ್ಳುವಂತೆ ಕೂಡ ನಾನು ಪ್ರಸ್ತಾಪವನ್ನು ಮಂಡಿಸಿದ್ದೇನೆ.  ನಾವು ಉತ್ತಮ ನೆರೆಹೊರೆಯವರಂತೆ ಬದುಕಿ ಕಾಶ್ಮೀರ ವಿವಾದಕ್ಕೆ ಪರಿಹಾರ ಕಂಡುಹಿಡಿಯಬೇಕು ಎಂದು ಸಲಹೆ ಮಾಡಿದರು. 
 ಗವರ್ನರ್ ಹೌಸ್‌ನಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಕಾಶ್ಮೀರ ಕುರಿತು ವಿಶ್ವಸಂಸ್ಥೆಯ ನಿರ್ಣಯವಾಗಿದ್ದು, ಪಾಕಿಸ್ತಾನದ ನಿರ್ಣಯವಲ್ಲ. ಆದ್ದರಿಂದ ಅದನ್ನು ಅನುಷ್ಠಾನಕ್ಕೆ ತರುವುದು ಅದರ ಕರ್ತವ್ಯ ಎಂದು ಷರೀಫ್ ಹೇಳಿದರು. 
 
 ನಾನು ಅವರ ಕಡೆ ನೋಡುತ್ತಾ ಸತ್ಯವನ್ನು ಹೇಳಿದ್ದೇನೆ. ವಿಶ್ವಸಂಸ್ಥೆ ಅದನ್ನು ಅರಿತುಕೊಂಡು ಕಾಶ್ಮೀರ ನಿರ್ಣಯವನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು. 
 ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅವರು ಷರೀಫ್ ನಾಲ್ಕಂಶಗಳ ಸೂತ್ರವನ್ನು ಪ್ರಸ್ತಾಪಿಸಿದರು. ಕಾಶ್ಮೀರದಲ್ಲಿ ಮಿಲಿಟರಿ ತೆಗೆಯುವುದು, ಸಿಯಾಚಿನ್‌ನಿಂದ ಬೇಷರತ್ತಿನೊಂದಿಗೆ ಭಾರತೀಯ ಪಡೆಗಳ ವಾಪಸಾತಿ, ಸಂಯೋಜಿತ ಮಾತುಕತೆ ಆರಂಭ ಮತ್ತು ಗಡಿ ಕದನವಿರಾಮಕ್ಕೆ ದೃಢ ರೂಪ ನೀಡುವುದು ಇವೇ ನಾಲ್ಕಂಶಗಳಾಗಿತ್ತು. 
 
ನಾವು ಆಪ್ಘಾನಿಸ್ತಾನದ ಜತೆ ಭದ್ರ ಬಾಂಧವ್ಯಕ್ಕೆ ಅಡಿಪಾಯ ಹಾಕಿದ್ದೇವೆ. ತಾಲಿಬಾನ್ ಸಂಘಟನೆಯನ್ನು ಮಾತುಕತೆಯ ಮೇಜಿಗೆ ತರಲು ಶ್ರಮ ಪಟ್ಟಿದ್ದೇವೆ. ಆದರೆ  ಮುಲ್ಲಾ  ಓಮರ್ ಸಾವಿನ ಸುದ್ದಿಯಿಂದ ಈ ಪ್ರಯತ್ನ ಧ್ವಂಸಗೊಂಡಿತು ಎಂದು ಷರೀಫ್ ಹೇಳಿದರು. ಪಾಕಿಸ್ತಾನ ಪುನಃ ತಾಲಿಬಾನ್ ಮತ್ತು ಆಫ್ಘನ್ ಸರ್ಕಾರವನ್ನು ಮಾತುಕತೆ ಮೇಜಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ