ಪಾಕ್ ಪತ್ರಕರ್ತೆಗೆ ಕಪಾಳಮೋಕ್ಷ ಮಾಡಿದ ಪಾಕ್ ಪೇದೆ

ಶುಕ್ರವಾರ, 21 ಅಕ್ಟೋಬರ್ 2016 (19:16 IST)
ಕರಾಚಿ ಸರಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲಿಗೆಳೆಯಲು ತೆರಳಿದ್ದ ಪತ್ರಕರ್ತೆಯೊಬ್ಬಳ ಮೇಲೆ ಪ್ಯಾರಾ ಮಿಲಿಟರಿ ಪಡೆಯ ಯೋಧನೊಬ್ಬ ಕಪಾಳಮೋಕ್ಷ ಮಾಡಿದ ಹೇಯ ಘಟನೆ ವರದಿಯಾಗಿದೆ.  ಇದೀಗ ವಿಡಿಯೋ ವೈರಲ್ ಆಗಿದೆ. 
ಕೆ21 ಖಾಸಗಿ ನ್ಯೂಸ್ ಚಾನೆಲ್‌ನ ವರದಿಗಾರ್ತಿಯಾಗಿರುವ ಸೈಮಾ ಕನ್ವಾಲ್, ನಾಜಿಮಾಬಾದ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಗುರುತಿನ ಚೀಟಿ ವಿತರಿಸುತ್ತಿರುವ ಕಚೇರಿಗೆ ತೆರಳಿ ಅಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಬಹಿರಂಗಪಡಿಸಿದ್ದರು.  
 
ಪ್ಯಾರಾ ಮಿಲಿಟರಿ ಪಡೆಯ ಯೋಧನೊಬ್ಬ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯವನ್ನು ಪತ್ರಕರ್ತೆ ಸೈಮಾ ವಿಡಿಯೋದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದಾಗ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. 
 
ಕ್ಯಾಮರಾಮೆನ್ ನಿಯಂತ್ರಣ ಕಳೆದುಕೊಂಡಾಗ ಆಕ್ರೋಶಗೊಂಡಿದ್ದ ಪ್ಯಾರಾ ಮಿಲಿಟರಿ ಪಡೆಯ ಯೋಧ ಪತ್ರಕರ್ತೆಗೆ ಕಪಾಳಮೋಕ್ಷ ಮಾಡಿದ ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಲು ಪ್ರಯತ್ನಿಸಿದ್ದಾನೆ. 
 
ಆರೋಪಿ ಯೋಧನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ