ಪಠಾನ್‌ಕೋಟ್ ದಾಳಿಯಲ್ಲಿ ಮೌಲಾನಾ ಮಸೂದ್ ಅಜರ್ ಪಾತ್ರವಿಲ್ಲ ಎಂದ ಪಾಕಿಸ್ತಾನ

ಸೋಮವಾರ, 8 ಫೆಬ್ರವರಿ 2016 (16:51 IST)
ಪಠಾನ್‌ಕೋಟ್ ಉಗ್ರರ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಪಾತ್ರವಿರುವ ಬಗ್ಗೆ ಮಹತ್ವದ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭಾರತ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ.
 
ಕಳೆದ ತಿಂಗಳು ನಡೆದ ಪಠಾನ್‌ಕೋಟ್ ಉಗ್ರ ದಾಳಿಯ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಿರಿಯ ಅಧಿಕಾರಗಳ ತಂಡ ರಚಿಸಿದ್ದರು. ಭಾರತ ನೀಡಿದ ಸಾಕ್ಷ್ಯಾಧಾರಗಳನ್ನು ವಿಚಾರಣೆ ನಡೆಸಿದ ತಂಡ, ಪಠಾನ್‌ಕೋಟ್ ದಾಳಿಯಲ್ಲಿ ಮೌಲಾನಾ ಮಸೂದ್ ಅಜರ್ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.
 
ಎಕ್ಸಪ್ರೆಸ್ ಟ್ರಿಬ್ಯೂನ್ ಪ್ರಕಾರ, ಪಠಾನ್‌ಕೋಟ್ ದಾಳಿಯಲ್ಲಿ ಮೌಲಾನ ಮಸೂದ್ ಅಜರ್ ಭಾಗಿಯಾಗಿದ್ದಾನೆ ಎನ್ನುವುದಕ್ಕೆ ಪ್ರಮುಖ ಸಾಕ್ಷ್ಯಗಳು ದೊರೆತಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳು ನವದೆಹಲಿಗೆ ತನಿಖಾ ವಿವರ ನೀಡಿದ್ದಾರೆ.
 
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೌಲಾನಾ ಮಸೂದ್ ಅಜರ್‌ನನ್ನು ಬಂಧಿಸಲು ಸಾಧ್ಯವಿಲ್ಲ.ಆದರೆ, ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಕೆಳಹಂತದ ಉಗ್ರರು ಭಾಗಿಯಾಗಿರುವುದನ್ನು ತಳ್ಳಿಹಾಕಲಾಗದು ಎಂದು ಪಾಕ್ ಸರಕಾರ ಶಂಕೆ ವ್ಯಕ್ತಪಡಿಸಿದೆ.
 
ಕಳೆದ ಜನೆವರಿ 2 ರಂದು ನಡೆದ ಪಠಾನ್‌ಕೋಟ್ ವಾಯಿನೆಲೆ ಉಗ್ರರ ದಾಳಿ ಮೂರು ದಿನಗಳ ಕಾಲ ಮುಂದುವರಿದು ಏಳು ಸೈನಿಕರು ಹುತಾತ್ಮರಾಗಿದ್ದರು. ಘಟನೆಯ ಬಗ್ಗೆ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ಸಾಕ್ಷ್ಯಾಧಾರಗಳನ್ನು ನೀಡಿದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ವಿಶೇಷ ತನಿಖಾ ತಂಡ ರಚಿಸಿದ್ದರು.

ವೆಬ್ದುನಿಯಾವನ್ನು ಓದಿ