ಅಗಲಿದ ಕ್ರಿಕೆಟಿಗ ಹ್ಯೂಸ್‌ಗೆ ಭಾವಪೂರ್ಣ ವಿದಾಯ; ಗದ್ಗದಿತರಾದ ಕ್ಲಾರ್ಕ್

ಬುಧವಾರ, 3 ಡಿಸೆಂಬರ್ 2014 (12:04 IST)
ತಲೆಗೆ ಬಾಲ್ ಬಡಿದು ದುರ್ಮರಣವನ್ನಪ್ಪಿದ ಕ್ರಿಕೆಟಿಗ ಫಿಲಿಪ್ ಹ್ಯೂಸ್ (26) ಅಂತ್ಯಕ್ರಿಯೆ ಇಂದು ಆಸ್ಟ್ರೇಲಿಯಾದ ಮ್ಯಾಕ್‌ವಿಲ್ಲೆಯಲ್ಲಿ ನಡೆಯಿತು. ಅವರ ಸ್ವಗ್ರಾಮ ನ್ಯೂ ಸೌತ್ ವೇಲ್ಸ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರಿಗೆ ಕೊನೆಯ ನಮನವನ್ನು ಸಲ್ಲಿಸಲಾಯಿತು.
 

ಪಾರ್ಥಿವ ಶರೀರವನ್ನು ಮ್ಯಾಕ್‌ವಿಲ್ಲೆ  ರಸ್ತೆಯೂದ್ದಖೂ ಮೆರವಣಿಗೆ ನಡೆಸಲಾಯಿತು.  ಅಗಲಿದ ಕ್ರಿಕೆಟಿಗನ ಅಂತಿಮ ಸಂಸ್ಕಾರಕ್ಕೆ 300 ಜನ ಗಣ್ಯರು ಸೇರಿದಂತೆ ಸುಮಾರು 5,000 ಜನ ಭಾಗವಹಿಸಿದ್ದರು. ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬೋಟ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಹ್ಯೂಸ್ ಸ್ನೇಹಿತರು ಮಿತ್ರನ ಸ್ಮರಿಸಿ ಕಂಬನಿ ಮಿಡಿದರು.

 

ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಎಲ್ಲ ಆಟಗಾರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಹ್ಯೂಸ್ ಆತ್ಮೀಯ ಸ್ನೇಹಿತ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಮತ್ತು ಆರಂಭಿಕ ಆಟಗಾರ ಆ್ಯರೋನ್‌ ಫಿಂಚ್‌ ಅಂತ್ಯಕ್ರಿಯೆಯ ವೇಳೆ ಹ್ಯೂಸ್‌ ಕುಟುಂಬ ಸದಸ್ಯರ ಜತೆ ಶವಪೆಟ್ಟಿಗೆಯನ್ನು ಹೊತ್ತು ನಡೆದರು.
 
ಶವಪೆಟ್ಟಿಗೆಗೆ ಹೆಗಲು ನೀಡಿದ್ದ ವೇಳೆ ಮೃತ ಆಟಗಾರನ ತಂದೆ ಅಗಲಿದ ಪುತ್ರನಿಗಾಗಿ ಕಂಬನಿ ಸುರಿಸಿದರು. ಕಿರಿಯ ಸಹೋದರ, ಸಹೋದರಿ ಕೂಡ ಅಣ್ಣನನ್ನು ನೆನೆದು ಕಣ್ಣೀರಿಟ್ಟರು. ಮೈಕಲ್ ಕ್ಲಾರ್ಕ್ ಸಹ ಆಟಗಾರನನ್ನು ಸ್ಮರಿಸಿಕೊಂಡು ಬಿಕ್ಕಳಿಸಿ ಅತ್ತರು.
 
ಮಾಜಿ ಆಟಗಾರರಾದ ಸ್ಟೀವ್‌ ವಾ, ಶೇನ್‌ ವಾರ್ನ್‌, ಮಾರ್ಕ್‌ ಟೇಲರ್‌, ರಿಕಿ ಪಾಂಟಿಂಗ್‌, ಆ್ಯಡಮ್‌ ಗಿಲ್‌ಕ್ರಿಸ್ಟ್‌, ಜಸ್ಟಿನ್ ಲ್ಯಾಂಗರ್‌ ಹಾಗೂ ನ್ಯೂಜಿಲೆಂಡ್‌ ತಂಡದ ಮಾಜಿ ಆಟಗಾರ ರಿಚರ್ಡ್‌ ಹ್ಯಾಡ್ಲಿ, ವೆಸ್ಟ್ ಇಂಡಿಸ್ ಕ್ರಿಕೆಟ್ ದಂತಕಥೆ  ಬ್ರಿಯಾನ್ ಲಾರ ಕೂಡ  ಹ್ಯೂಸ್‌ಗೆ ಅಂತಿಮ ವಂದನೆಗಳನ್ನು ಸಲ್ಲಿಸಿದರು.
 
ಭಾರತ ತಂಡದ ನಿರ್ದೇಶಕ ರವಿ ಶಾಸ್ತ್ರೀ,ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮ, ಮುರಳಿ ವಿಜಯ್‌, ಕೋಚ್‌ ಡಂಕನ್‌ ಫ್ಲೆಚರ್‌  ಸಹ  ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
 
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನವೆಂಬರ್ 24 ರಂದು ನಡೆದ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯ ಪಂದ್ಯದ ವೇಳೆ ಸೀನ್ ಅಬಾಟ್‌ ಎಸೆದ ಬೌನ್ಸರ್‌ ಚೆಂಡು ಹ್ಯೂಸ್‌ ತಲೆಗೆ ಬಡಿದಿತ್ತು. ತಕ್ಷಣ ಕೋಮಾಕ್ಕೆ ಜಾರಿದ್ದ ಅವರು ಎರಡು ದಿನಗಳ ನಂತರ ನವೆಂಬರ್‌ 27 ರಂದು ಮೃತಪಟ್ಟಿದ್ದರು.
 
ಜಗತ್ತಿನ ಎಲ್ಲ ಭಾಗಗಳಿಂದಲೂ ಹರಿದುಬರುತ್ತಿರುವ ಬೆಂಬಲಕ್ಕೆ ಹ್ಯೂಸ್‌ ಕುಟುಂಬ ಮನ ಮಿಡಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹ್ಯೂಸ್‌ ಅವರಿಗೆ ಬರುತ್ತಿರುವ ಶ್ರದ್ಧಾಂಜಲಿ ಸಂದೇಶಗಳಿಂದ ಕುಟುಂಬದ ಹೃದಯ ತುಂಬಿಬಂದಿದೆ ಎಂದು ಅಗಲಿದ ಕ್ರಿಕೆಟಿಗನ ಮ್ಯಾನೇಜರ್ ಜೇಮ್ಸ್ ಹೆಂಡರಂನ್‌ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ