ಬ್ರಿಟನ್ ಸಂಸತ್ತಿನಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಪ್ರಧಾನಿ ಮೋದಿ

ಶುಕ್ರವಾರ, 13 ನವೆಂಬರ್ 2015 (20:22 IST)
ಬ್ರಿಟನ್ ಸಂಸತ್ತಿನಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಭಾರತೀಯ ಎನ್ನುವ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. 
 
ಬ್ರಿಟನ್ ಸಂಸತ್ತಿನಲ್ಲಿ ಭಾಷಣ ಮಾಡುತ್ತಿರುವುದಕ್ಕೆ ಹಾಗೂ ಲಂಡನ್‌ಗೆ ಆಗಮಿಸಿರುವುದಕ್ಕೆ ಸಂತಸವಾಗಿದೆ ಎಂದು ಭಾಷಣ ಆರಂಭಿಸಿದ ಮೋದಿ, ಬ್ರಿಟನ್ ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿಲ್ಲವಾದ್ದರಿಂದ ಪ್ರಧಾನಿ ಕ್ಯಾಮರೂನ್ ನಿರಾಳರಾಗಿದ್ದಾರೆ ಎಂದು ನಗೆ ಚಟಾಕಿ ಹಾರಿಸಿದರು.
 
ಒಂದು ಬಾರಿ, ನನಗೆ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಬ್ರಿಟನ್ ಸಂಸತ್ತಿನ ಹೊರಗಡೆ ಯಾಕೆ ನಿಲ್ಲಿಸಲಾಗಿದೆ ಎಂದು ಒಬ್ಬರು ಕೇಳಿದಾಗ, ಬ್ರಿಟನ್‌ ವಾಸಿಗಳು ಬುದ್ದಿವಂತರಾಗಿದ್ದರಿಂದ ಅವರ ಶ್ರೇಷ್ಠತೆಯನ್ನು ಪರಿಗಣಿಸಿದ್ದಾರೆ. ಆದರೆ, ನಾವು ಭಾರತೀಯರು ಅವರನ್ನು ಹಂಚಿಕೊಳ್ಳುವಲ್ಲಿ ಪ್ರವೀಣರಾಗಿದ್ದೇವೆ ಎಂದು ಹೇಳಿದ್ದಾಗಿ ತಿಳಿಸಿದರು.  
 
ಗುರುವಾರದಂದು ಲಂಡನ್‌ಗೆ ಮೂರು ದಿನಗಳ ಪ್ರವಾಸಕ್ಕಾಗಿ ಆಗಮಿಸಿದ ಮೋದಿ, ಪ್ರಧಾನಿಯಾದ ನಂತರ ಮೊದಲ ಬಾರಿ ಯುಕೆಗೆ ಭೇಟಿ ನೀಡಿದ್ದಾರೆ. ಬ್ರಿಟನ್ ಪ್ರಧಾನಿಯೊಂದಿಗೆ ದ್ವೀಪಕ್ಷೀಯ ಸಂಬಂಧ ವೃದ್ಧಿ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಮೂರನೇ ಬಾರಿ ಚರ್ಚೆ ನಡೆಸುತ್ತಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜಯಶಂಕರ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ