ರೇಪ್ ಹಾವಳಿ: ಬ್ರಿಟನ್‌ಗೆ ವಿಶ್ವದಲ್ಲಿಯೇ ಐದನೇ ಸ್ಥಾನ

ಸೋಮವಾರ, 16 ಮಾರ್ಚ್ 2015 (20:51 IST)
3 ವರ್ಷಗಳ ಹಿಂದೆಯಲ್ಲಿ ದಿಲ್ಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಸಿಯು ನಿರ್ಮಿಸಿದ ಆರೋಪಿಯ ಸಂದರ್ಶನಾಧರಿತ ಸಾಕ್ಷ್ಯಚಿತ್ರಕ್ಕೆ ಪ್ರತಿಯಾಗಿ ಬ್ರಿಟನ್‌ನಲ್ಲಿನ ಅತ್ಯಾಚಾರಗಳ ಕುರಿತಂತೆ ಭಾರತೀಯ ಮೂಲದವರೊಬ್ಬರು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.

ಈ ವೀಡಿಯೋದಲ್ಲಿ ವಿಶ್ವದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅತ್ಯಾಚಾರ ನಡೆಯುವ ರಾಷ್ಟ್ರಗಳ ಪೈಕಿ ಬ್ರಿಟನ್‌ ಐದನೇ ಸ್ಥಾನದಲ್ಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಬ್ರಿಟನ್‌ನಲ್ಲಿ 10 ಅತ್ಯಾಚಾರಿಗಳಲ್ಲಿ ಕೇವಲ ಓರ್ವನಿಗೆ ಮಾತ್ರ ಶಿಕ್ಷೆಯಾಗುತ್ತಿದೆ ಎಂದೂ ಟೀಕಿಸಲಾಗಿದೆ.

2012ರಲ್ಲಿ ದಿಲ್ಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಮೇಲೆ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಐವರು ಆರೋಪಿಗಳಲ್ಲಿ ಓರ್ವನಾಗಿರುವ ಮುಕೇಶ್‌ ಸಿಂಗ್‌ನ ಸಂದರ್ಶನವನ್ನಾಧರಿಸಿ ಲೆಸ್ಲಿà ಉಡ್ವಿನ್‌ ಬಿಬಿಸಿಗಾಗಿ "ಇಂಡಿಯಾಸ್‌ ಡಾಟರ್‌' ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಇದಕ್ಕೆ ಭಾರತದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ ವಿದೇಶಗಳಲ್ಲಿರುವ ಭಾರತೀಯರೂ ಭಾರತದ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನ ಇದಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಬಿಸಿಯ ಈ ವಿವಾದಾತ್ಮಕ ಸಾಕ್ಷ್ಯಚಿತ್ರಕ್ಕೆ ಪ್ರತಿಯಾಗಿ ಭಾರತೀಯ ಮೂಲದ ಹರ್ವಿಂದರ್‌ ಸಿಂಗ್‌ ಎಂಬಾತ "ಯುನೈಟೆಡ್‌ ಕಿಂಗ್‌ಡಮ್ಸ್‌ ಡಾಟರ್‌' ಎಂಬ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಲೈಂಗಿಕ ಹಿಂಸೆಯು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ಇಡೀ ವಿಶ್ವದ ಸಮಸ್ಯೆಯಾಗಿದೆ ಎಂದು ಇದರಲ್ಲಿ ಪ್ರತಿಪಾದಿಸಲಾಗಿದೆ. ಬ್ರಿಟನ್‌ನಲ್ಲಿ ನಡೆದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಂಕಿಅಂಶಗಳನ್ನು ಈ ವೀಡಿಯೋ ಒಳಗೊಂಡಿದ್ದು ವಿಶ್ವದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅತ್ಯಾಚಾರ ನಡೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್‌ 5ನೇ ಸ್ಥಾನದಲ್ಲಿದೆ. ಆದರೆ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ದಾಖಲಾಗುವುದೇ ಇಲ್ಲ ಎಂದು ತಿಳಿಸಲಾಗಿದೆ.

ಬ್ರಿಟನ್‌ನಲ್ಲಿನ ಒಟ್ಟು ಮಹಿಳೆಯರಲ್ಲಿ ಶೇ.10ರಷ್ಟು ಮಹಿಳೆಯರು ಲೈಂಗಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಮೂರನೇ ಒಂದರಷ್ಟು ಜನರು ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಗಳಿಗೆ ಮಹಿಳೆಯರೇ ಕಾರಣರಾಗುತ್ತಿದ್ದಾರೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ. ಅಲ್ಲದೆ ಈ ವೀಡಿಯೋದಲ್ಲಿ ಬ್ರಿಟಿಷ್‌ ಸಮಾಜವನ್ನು ಟೀಕಿಸಲಾಗಿದ್ದು ಶೇ.41ರಷ್ಟು ವಿವಾಹಗಳು 20ವರ್ಷಗಳಲ್ಲಿ ಮುರಿದು ಬೀಳುತ್ತಿದ್ದರೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.11ರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ ಮತ್ತು 65ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಶೇ.31ರಷ್ಟು ಮಂದಿ ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿದ್ದಾರೆ ಎಂದಿದೆ.

ವೆಬ್ದುನಿಯಾವನ್ನು ಓದಿ