ಕೋಮಾದಲ್ಲಿರುವ ಶೂಮಾಕರ್ ಕಣ್ಣೀರು ಸುರಿಸುತ್ತಾರಂತೆ!

ಸೋಮವಾರ, 5 ಜನವರಿ 2015 (13:02 IST)
ಕಳೆದೊಂದು ವರ್ಷದಿಂದ ಕೋಮಾ ಸ್ಥಿತಿಯಲ್ಲಿರುವ ಫಾರ್ಮುಲಾ ಒನ್ ಮಾಜಿ ಚಾಂಪಿಯನ್ ಮೈಕಲ್ ಶೂಮಾಕರ್  ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. 
ಈಗ ಅವರು ತಮ್ಮ ಮಕ್ಕಳು ಮತ್ತು ಪತ್ನಿಯನ್ನು  ಗುರುತಿಸ ತೊಡಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
 
ಡಿಸೆಂಬರ್ 2013ರಲ್ಲಿ ಸ್ಕೀಯಿಂಗ್ ಮಾಡುವಾಗ ಗಂಭೀರವಾಗಿ ಗಾಯಗೊಂಡಿದ್ದ ಫಾರ್ಮುಲಾ ಒನ್ ಚಕ್ರವರ್ತಿ ಮೈಕೆಲ್ ಶೂಮಾಕರ್ ಕೋಮಾ ಸ್ಥಿತಿಗೆ ಜಾರಿದ್ದರು. ಪ್ರಸ್ತುತ, ಅವರಿಗೆ ಮನೆಯಲ್ಲಿಯೇ  ಚಿಕಿತ್ಸೆ ನೀಡಲಾಗುತ್ತಿದೆ.
 
45 ವರ್ಷದ ಶೂಮಾಕರ್ ಫಾರ್ಮುಲಾ 1 ರೇಸ್‌ನ ಚಾಲಕರಾಗಿದ್ದು, ಅತಿ ಹೆಚ್ಚು ರೇಸ್‌ಗಳನ್ನು ಗೆದ್ದ ದಾಖಲೆಯನ್ನು ಇವರು ಹೊಂದಿದ್ದಾರೆ.
 
ಧ್ವನಿ ಕೇಳಿ ಕಣ್ಣಿಂದ ನೀರು 
 
ಮಾಧ್ಯಮವೊಂದರ ಜತೆ ಮಾತನಾಡುತ್ತಿದ್ದ ಶೂಮಾಕರ್ ಪತ್ನಿ ಕೊರಿನಾ, "ಅವರೀಗ ನಮ್ಮನ್ನು ಗುರುತಿಸುತ್ತಿದ್ದಾರೆ. ನನ್ನ ಮತ್ತು ಮಗನ ಮಾತು ಕೇಳಿ ಒಮ್ಮೆ ಅವರು ಕಣ್ಣೀರು ಸುರಿಸ ತೊಡಗಿದರು. ಆದರೆ ಅವರಿಂದ ಒಂದು ಶಬ್ಧ ಕೂಡ ಮಾತನಾಡಲಾಗಲಿಲ್ಲ", ಎಂದು ಹೇಳಿದ್ದಾರೆ.
 
ಅಪಘಾತಕ್ಕೀಡಾದ ಮೇಲೆ ಕೇವಲ ಹಾಸಿಗೆ ಮೇಲೆ ಮಲಗಿರುತ್ತಿದ್ದ ಶೂಮಾಕರ್, ಥೆರಪಿಯ ನಂತರ  ಕಿಟಕಿ ಬಳಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 
ಡಿಸೆಂಬರ್ 29, 2013ರಲ್ಲಿ ಫ್ರಾನ್ಸ್‌ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಮೈಕೆಲ್ ಶೂಮಾಕರ್ ಆಯತಪ್ಪಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಂಡೆಗೆ ಅವರ ತಲೆ ಬಡಿದ ಕಾರಣ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಅವರು ಕೋಮಾ ಸ್ಥಿತಿ ತಲುಪಿದ್ದರು. ಸತತ ಐದು ವಾರಗಳ ಚಿಕಿತ್ಸೆ ಪಡೆದಿದ್ದ ಶೂಮಾಕರ್ ಅವರಿಗೆ ಎರಡು ಪ್ರಮುಖ ಶಸ್ತ್ರ ಚಿಕಿತ್ಸೆ ನಡೆಸಿ ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತಗೆಯಲಾಗಿತ್ತು. 
 
ಕೆಲ ತಿಂಗಳುಗಳ ಹಿಂದೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. 

ವೆಬ್ದುನಿಯಾವನ್ನು ಓದಿ