ಗಡಿಯಲ್ಲಿ ತಂಟೆ ಮಾಡುತ್ತಿರುವುದು ಭಾರತ: ಒಬಾಮಾ ಬಳಿ ದೂರಿದ ಪಾಕ್ ಪ್ರಧಾನಿ

ಶನಿವಾರ, 22 ನವೆಂಬರ್ 2014 (13:12 IST)
ಅಮೇರಿಕಾದ ಅಧ್ಯಕ್ಷ ಒಬಾಮಾರವರ ಬಳಿ ದೂರವಾಣಿ ಸಂಭಾಷಣೆ ನಡೆಸಿದ ಪಾಕ್ ಪ್ರಧಾನಿ ನವಾಜ್ ಶರೀಫ್  ಭಾರತ ಭೇಟಿ ಸಂದರ್ಭದಲ್ಲಿ  ಕಾಶ್ಮೀರ ವಿಷಯವನ್ನು ಜರೂರಾಗಿ ಪ್ರಸ್ತಾಪಿಸಿ ಎಂದು ಕೇಳಿಕೊಂಡಿದ್ದಾರೆ.

ಮುಂದಿನ ವರ್ಷ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಮೇರಿಕಾದ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಶುಕ್ರವಾರ ಪ್ರಧಾನಿ ಮೋದಿಯವರ ಈ ಆಹ್ವಾನವನ್ನು ಸ್ವೀಕರಿಸಿದ ನಂತರ  ಒಬಾಮಾ ಪಾಕ್ ಪ್ರಧಾನಿಗೆ ಕರೆ ಮಾಡಿದ್ದರು.
 
ಬಲ್ಲ ಮೂಲಗಳ ಪ್ರಕಾರ ಒಬಾಮಾ, ಶರೀಫ್ ಬಳಿ ತಮ್ಮ ಭಾರತ ಭೇಟಿಯ ಕುರಿತು ಮಾಹಿತಿ ನೀಡಿದ್ದಾರೆ. ಶರೀಫ್ ಬಳಿ ತಾವು ಗಣರಾಜ್ಯೋತ್ಸವದ ದಿನ ಭಾರತಕ್ಕೆ ಭೇಟಿ ನೀಡುತ್ತಿರುವುದಾಗಿ ಹೇಳಿದ ಅವರು  ಸದ್ಯದಲ್ಲಿ ಪಾಕಿಸ್ತಾನಕ್ಕೆ ಬರುವುದು ಅಸಾಧ್ಯ. ಆದ್ದರಿಂದ  ಭವಿಷ್ಯದಲ್ಲಿ ಪಾಕ್ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. 
 
ಮಾತಿನ ಮಧ್ಯೆ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದ ಶರೀಫ್ ಭಾರತ ಪ್ರವಾಸದಲ್ಲಿ ಕಾಶ್ಮೀರ ಸಮಸ್ಯೆಯ ಬಗ್ಗೆ ಮಧ್ಯಸ್ಥಿಕೆ ವಹಿಸ ಬೇಕಾಗಿ ಕೇಳಿಕೊಂಡರು. ಭಾರತ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ ಎಂದು ಸುಳ್ಳು ಆರೋಪ  ಮಾಡಿದ ಅವರು ಕಾಶ್ಮೀರ ಸಮಸ್ಯೆಯ ಕುರಿತು ಮಾತನಾಡಲು ಭಾರತ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.
 
ಅಲ್ಲದೇ ಪಾಕ್‌ಗೆ ಬರಲು ಅಮೇರಿಕಾ ಅಧ್ಯಕ್ಷರಿಗೆ ತಾವು ನೀಡಿದ್ದ ಆಹ್ವಾನವನ್ನು ಅವರು ನೆನಪಿಸಿದರು. ಆದರೆ  ಈಗಿನ ಸನ್ನಿವೇಶಗಳು ಸರಿಯಾಗಿಲ್ಲದ ಕಾರಣ  ಇನ್ನೊಮ್ಮೆ ತಾವು ಭೇಟಿ ನೀಡುವುದಾಗಿ ಒಬಾಮಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ