ಸಿಂಗಾಪುರ್: ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಣ; ಭಾರತೀಯ ಮೂಲದ ಆರೋಪಿಗೆ 6 ತಿಂಗಳು ಜೈಲು

ಶನಿವಾರ, 23 ಮೇ 2015 (17:36 IST)
ಸಾರ್ವಜನಿಕ ಸ್ಥಳಗಳಲ್ಲಿ 60ಕ್ಕೂ ಹೆಚ್ಚು ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ಚಿತ್ರಿಕರಣವನ್ನು ಮಾಡಿಕೊಂಡ ಭಾರತೀಯ ಮೂಲದ ಯುವಕನೊಬ್ಬನಿಗೆ ಸಿಂಗಾಪುರದ ನ್ಯಾಯಾಲಯ 6 ತಿಂಗಳ ಶಿಕ್ಷೆಯನ್ನು ನೀಡಿದೆ. 

ಅಪರಾಧಿಯನ್ನು 34 ವರ್ಷದ ನಂತ್ ಕುಮಾರ್ ಪಾಲಕೃಷ್ಣನ್ ಎಂದು ಗುರುತಿಸಲಾಗಿದ್ದು ತನ್ನ ಲಾಪ್‌ಟಾಪ್ ಬ್ಯಾಗ್‌ನಲ್ಲಿ ಕೆಲವು ಪುಸ್ತಕಗಳನ್ನು ಇಟ್ಟು ಅದರ ಮೇಲೆ ತನ್ನ ಐಫೋನ್- 4ನ ಕ್ಯಾಮರಾ ಮೋಡ್‌ನ್ನು ಮೇಲ್ಮುಖವಾಗಿರಿಸಿ, ಝೀಪ್ ತೆಗೆದಿಟ್ಟು ರಹಸ್ಯವಾಗಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ.
 
ಜೂನ್ 2013ರಲ್ಲಿ ಅಂತರ್ಜಾಲದಲ್ಲಿ ಇಂತಹ ಆಕ್ಷೇಪಾರ್ಹ ವಿಡಿಯೋಗಳನ್ನು ನೋಡಿದ ಬಳಿಕ ಆತ ಈ ನೀಚ ಕೆಲಸವನ್ನು ಆರಂಭಿಸಿದ್ದ . ಅದೇ ವರ್ಷದ ಜುಲೈ ನಿಂದ ಆಗಸ್ಟ್ ತಿಂಗಳುಗಳ ನಡುವೆ ಜನಪ್ರಿಯ ಶಾಪಿಂಗ್ ಮಾಲ್‌ಗಳಲ್ಲಿ ಮತ್ತು ಸಬ್‌ವೇ ನಿಲ್ದಾಣಗಳಲ್ಲಿ ಓಡಾಡುತ್ತಿದ್ದ ಮಹಿಳೆಯರನ್ನು ಆತ ಗುರಿಯಾಗಿಸಿದ್ದ. 
 
ಆದರೆ ಆಗಸ್ಟ್ 26 , 2013ರಲ್ಲಿ ಆತ ಶಾಪಿಂಗ್ ಮಾಲ್ ಒಂದರಲ್ಲಿ ಈ ಕೃತ್ಯವನ್ನು ಎಸಗುತ್ತಿದ್ದಾಗ ಮಹಿಳೆಯೊಬ್ಬರ ಪುರುಷ ಸಹೋದ್ಯೋಗಿ ಆತನ ಕುಕೃತ್ಯವನ್ನು ಕಂಡು ಹಿಡಿದಿದ್ದ. ಮಹಿಳೆಯ ಬೆನ್ನ ಹಿಂದಿನ ಸ್ಥಳದಲ್ಲಿ ಬ್ಯಾಗ್ ಇಟ್ಟು ಮೊಬೈಲ್ ಅಡ್ಜೆಸ್ಟ್ ಮಾಡುತ್ತಿದ್ದ ಸಂದರ್ಭದಲ್ಲಿ ಆತ ಸಿಕ್ಕಿ ಹಾಕಿಕೊಂಡಿದ್ದ.  ಆಗ ಆತ ಕ್ಷಮೆಯಾಚಿಸಿದ. ಆದರೆ ಆ ವ್ಯಕ್ತಿ ಪಾಲಕೃಷ್ಣನ್ ಬ್ಯಾಗ್ ಓಪನ್ ಮಾಡಿ ಅದರಲ್ಲಿ ಫೋನ್ ರೆಕಾರ್ಡಿಂಗ್ ಮೋಡ್‌ಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದ. 
 
ಈ ಕುರಿತು ಪೊಲೀಸರಲ್ಲಿ ದೂರು ನೀಡಲಾಯಿತು. ಪರಿಶೀಲನೆ ನಡೆಸಿದ ಪೊಲೀಸರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ವಿಡಿಯೋಗಳು ಸಿಕ್ಕಿವೆ. ಮರುದಿನ ಆತನ ಅಪಾರ್ಟ್‌ಮೆಂಟ್‌ನಲ್ಲಿ ದಾಳಿ ನಡೆಸಿ ಆತನ ಲ್ಯಾಪ್‌ಟಾಪ್ ವಶಪಡಿಸಿಕೊಂಡ ಪೊಲೀಸರಿಗೆ ಅದರಲ್ಲೂ ಸಹ ಇಂತಹ ವಿಡಿಯೋಗಳು ಕಂಡು ಬಂದಿವೆ. 
 
ಆತನ ಮೇಲೆ 8 ಆರೋಪಗಳನ್ನು ಹೊರಿಸಲಾಗಿತ್ತು ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಅಪರಾಧಿ ಎಂದು ಪರಿಗಣಿಸಲಾಯಿತು.

ವೆಬ್ದುನಿಯಾವನ್ನು ಓದಿ