10 ವರ್ಷ ವಯಸ್ಸಿನ ಮಿಲಿಟರಿ ಹೀರೊನನ್ನು ಗುಂಡಿಕ್ಕಿ ಕೊಂದ ತಾಲಿಬಾನ್

ಬುಧವಾರ, 3 ಫೆಬ್ರವರಿ 2016 (15:54 IST)
ವಾಸಿಲ್ ಅಹ್ಮದ್ ತಾಲಿಬಾನ್ ಮುತ್ತಿಗೆ ವಿರುದ್ಧ ಹೋರಾಟದ ಮುಂದಾಳತ್ವ ವಹಿಸಿ ಆಫ್ಘನ್ ಸರ್ಕಾರದಿಂದ ಹೀರೋ ಎಂಬ ಪಟ್ಟ ಪಡೆದಿದ್ದ. ಯಾರದ್ದೋ ಯರವಲು ಪಡೆದ ದೊಡ್ಡ ಗಾತ್ರದ ಸಮವಸ್ತ್ರವನ್ನು ಅವನಿಗೆ ತೊಡಿಸಿ ಕ್ಯಾಮೆರಾ ಎದುರು ಪೆರೇಡ್ ಮಾಡಿಸಿದ್ದರು. ಆದರೆ ಸೋಮವಾರ ಆಗಿದ್ದೇನು?

 ವಾಸಿಲ್ ಅಹ್ಮದ್ ತಲೆಗೆ ಎರಡು ಗುಂಡುಗಳನ್ನು ಹೊಗಿಸಿ ಹತ್ಯೆ ಮಾಡಿದ್ದೇವೆ ಎಂದು ತಾಲಿಬಾನ್ ಉಗ್ರರ ಸಂಘಟನೆ ಜಂಬ ಕೊಚ್ಚಿಕೊಂಡಿದೆ.  ವಾಸಿಲ್ ಅಹ್ಮದ್ ಕೇವಲ 10 ವರ್ಷ ವಯಸ್ಸಿನ ಪುಟ್ಟ ಬಾಲಕ. ಒರುಜ್‌ಗಾನ್ ಪ್ರಾಂತ್ಯದ ತಿರಿನ್ ಕೋಟ್ ನಗರದಲ್ಲಿ ಅವನಿಗೆ ಗುಂಡಿಕ್ಕಿ ಸಾಯಿಸಲಾಯಿತು. ಮಿಲಿಟರಿ ಜೀವನ ತೊರೆದು ಶಾಲೆಯಲ್ಲಿ ನಾಲ್ಕನೇ ತರಗತಿಗೆ ಸೇರಿದ ಬಾಲಕ ಇಂದು ಹೆಣವಾಗಿ ಬಿದ್ದಿದ್ದಾನೆ. 
 
ಸರ್ಕಾರಿ ಪರ ಪಡೆಗಳಲ್ಲಿ ಮತ್ತು ತಾಲಿಬಾನ್ ಉಗ್ರರಲ್ಲಿ ಆಡುವ ವಯಸ್ಸಿನ ಬಾಲ ಸೈನಿಕರು  ಕೂಡ ಹೋರಾಟದ ಭಾಗವಾಗಿರುವ ನೋವಿನ ಸಂಗತಿಯನ್ನು ವಾಸಿಲ್ ಕಥೆ ಬಿಚ್ಚಿಡುತ್ತದೆ.  ಅಧ್ಯಕ್ಷ ಅಶ್ರಫ್ ಘಾನಿ ಕಳೆದ ವರ್ಷ  ಮಕ್ಕಳನ್ನು ಸೈನ್ಯಕ್ಕೆ ಸೇರಿಸಬಾರದೆಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಆದರೆ ಆಫ್ಘನ್ ಪಡೆಯಲ್ಲಿ ಈಗಲೂ ಮಕ್ಕಳನ್ನು ಹೋರಾಟಕ್ಕೆ ಬಳಸಿಕೊಳ್ಳುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ ಎಂದು ಮಾನವ ಹಕ್ಕು ಆಯೋಗದ ವಕ್ತಾರ ರಫಿಯುಲ್ಲಾ ಬೈದರ್ ಹೇಳಿದ್ದಾರೆ.
 
ಪ್ರಾಂತೀಯ ಸರ್ಕಾರ ವಾಸಿಲ್‌ನ ಕೆಚ್ಚೆದೆಯ ಹೋರಾಟವನ್ನು ಕೊಂಡಾಡಿ ದೊಗಳೆ ಪೊಲೀಸ್ ಸಮವಸ್ತ್ರದಲ್ಲಿ ಪೆರೇಡ್ ಮಾಡಿ ಕಾನೂನನ್ನು ಮುರಿಯಿತು ಎಂದು ಬೈದರ್ ಹೇಳಿದರು. ಆದರೆ ಸೈನಿಕ ವೃತ್ತಿ ತೊರೆದು ವಿದ್ಯಾರ್ಥಿ ಜೀವನಕ್ಕೆ ಪ್ರವೇಶಿಸಿದ ವಾಸಿಲ್‌ನನ್ನು ತಾಲಿಬಾನ್ ಕೊಂದಿದ್ದನ್ನು ಬೈದರ್ ಖಂಡಿಸಿದರು. 
 
ಅನೇಕ ರೀತಿಯಲ್ಲಿ ಬಂದೂಕಿನ ಜೀವನಕ್ಕೆ ವಾಸಿಲ್ ಹುಟ್ಟಿದಾಗಲೇ ಒಗ್ಗಿಹೋಗಿದ್ದ. ಅವನ ಚಿಕ್ಕಪ್ಪ ಮುಲ್ಲಾ ಅಬ್ದುಲ್ ಸಮದ್ ತಾಲಿಬಾನ್ ಕಮಾಂಡರ್ ಆಗಿದ್ದ. ವಾಸಿಲ್ ತಂದೆಯ ಜತೆ 36 ಮಂದಿ ಸರ್ಕಾರವನ್ನು ಬೆಂಬಲಿಸಿ ಅದಕ್ಕೆ ಸೇರಿದ್ದರು.  ಇದಕ್ಕೆ ಪ್ರತಿಯಾಗಿ ಸರ್ಕಾರ ಸಮದ್‌ನನ್ನು ಕಮಾಂಡರ್ ಹುದ್ದೆಗೆ ನೇಮಿಸಿತ್ತು.ಸಮದ್ ಪಡೆಗಳು ತಾಲಿಬಾನ್ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿತು. ಈ ಹೋರಾಟದಲ್ಲಿ ಸಮದ್ ವಾಸಿಲ್ ತಂದೆ ಸೇರಿ 18 ಜನರನ್ನು ಕಳೆದುಕೊಂಡ. ಒಂದು ತಿಂಗಳ ಹಿಂದೆ ತಾಲಿಬಾನ್ ದಾಳಿಯಲ್ಲಿ ಸಮದ್ ಮತ್ತು 10 ಮಂದಿ ಗಾಯಗೊಂಡರು. ವಾಸಿಲ್ ಮುಂದಾಳತ್ವ ವಹಿಸಿ ತಾಲಿಬಾನ್ ಪಡೆಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ್ದ ಎಂದು ಸಮದ್ ಸ್ಮರಿಸಿಕೊಂಡರು. 

ವೆಬ್ದುನಿಯಾವನ್ನು ಓದಿ