ಕ್ಯಾಮರೂನ್‌ನ ಉಪ ಪ್ರಧಾನ ಮಂತ್ರಿಯ ಪತ್ನಿಯನ್ನು ಅಪಹರಿಸಿದ ಉಗ್ರರು

ಮಂಗಳವಾರ, 29 ಜುಲೈ 2014 (16:55 IST)
ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಬೋಕೊ ಹರಮ್‌ನ ಆತಂಕವಾದಿಗಳು ಕ್ಯಾಮರೂನ್‌ನ ಉಪ ಪ್ರಧಾನ ಮಂತ್ರಿ ಅಮಾಡೊ ಅಲಿಯ ಪತ್ನಿಯನ್ನು ಅಪಹರಣ ಮಾಡಿದ್ದಾರೆ. ಆತಂಕವಾದಿಗಳ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಒಬ್ಬ ಸ್ಥಳೀಯ ಧಾರ್ಮಿಕ ನಾಯಕ ಮತ್ತು ನಗರದ ಮೇಯರ್‌ ಶೆನಿ ಬವುಕಾರ್‌ ಲಮಾಯಿನ್‌‌‌‌ರನ್ನು ಕೂಡ ಅವರ ಮನೆಯಿಂದ ಅಪಹರಿಸಿದ್ದಾರೆ.
 
ನೈಜೆರಿಯಾದಲ್ಲಿ ಬೋಕೋ ಹರಮ್ ಉಗ್ರರನ್ನು ಸದೆಬಡೆಯಲು ಕ್ಯಾಮರೂನ್ ಸರಕಾರ ಅಂತಾರಾಷ್ಟ್ರೀಯ ಸೇನೆಗೆ ನೆರವು ನೀಡಿತ್ತು. ಇದರಿಂದ ಆಕ್ರೋಶಗೊಂಡ ಉಗ್ರರು ಕಳೆದ ಕೆಲ ವಾರಗಳಿಂದ ಕ್ಯಾಮರೂನ್‌ನಲ್ಲಿ ದಾಳಿಯನ್ನು ಹೆಚ್ಚಿಸಿದ್ದಾರೆ.
 
ನೈಜೆರಿಯಾ ಗಡಿಯಿಂದ ಉತ್ತರ ಭಾಗದಲ್ಲಿರುವ ಕೊಲೊಫಾಟಾ ನಗರದಲ್ಲಿರುವ ಉಪಪ್ರಧಾನ ಮಂತ್ರಿಯ ನಿವಾಸದ ಮೇಲೆ ದಾಳಿ ಮಾಡಿದ ಉಗ್ರರು ಅವರ ಪತ್ನಿಯನ್ನು ಅಪಹರಿಸಿದ್ದಾರೆ ಎಂದು ಕ್ಯಾಮರೂನ್‌‌ನ ವಾರ್ತಾ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  
 
ಪಶ್ಚಿಮ ಆಫ್ರಿಕಾದಲ್ಲಿ ನೈಜೇರಿಯಾ ಮತ್ತು ಕ್ಯಾಮರೂನ್ ನೆರೆ ದೇಶಗಳಾಗಿವೆ. ಈ ದೇಶಗಳು ಕಟ್ಟಾ ಇಸ್ಲಾಮಿ ಉಗ್ರವಾದಿ ಸಂಘಟನೆ ಬೊಕೊ ಹರಮ್‌‌ನ ದಾಳಿಗಳನ್ನು ಎದುರಿಸುತ್ತಿವೆ. 
 
ಎಪ್ರಿಲ್‌‌‌ನಲ್ಲಿ ಈ ಸಂಘಟನೆ ಉತ್ತರ ನೈಜೇರಿಯಾದ ಚಿಬೂಕ್‌‌ನಲ್ಲಿ 200 ಶಾಲಾ ವಿದ್ಯಾರ್ಥಿಗಳನ್ನು ಅಪಹರಣ ಮಾಡಿತ್ತು ಮತ್ತು ಜೂನ್‌‌‌ನಲ್ಲಿ ಆಬುಜಾದಲ್ಲಿ ಬಾಂಬ್ ಸ್ಪೋಟಿಸಿತ್ತು. ಇದರಲ್ಲಿ 21 ಜನರು ಸಾವನ್ನಪ್ಪಿದ್ದಾರೆ. 

ವೆಬ್ದುನಿಯಾವನ್ನು ಓದಿ