"ಆತ್ಮಹತ್ಯೆ ಸೇತುವೆ"ಯಲ್ಲಿ ಅಡ್ಡಾಡುತ್ತಿದೆ ಕಾರ್ಮಿಕನ ಪ್ರೇತಾತ್ಮ

ಮಂಗಳವಾರ, 22 ಜುಲೈ 2014 (18:13 IST)
ಇಲ್ಲೊಂದು ಆತ್ಮಹತ್ಯೆ ಸೇತುವೆ ಪ್ರೇತಾತ್ಮದಿಂದ ಪೀಡಿತವಾಗಿದೆ ಎನ್ನುವುದು  ಅಲ್ಲಿನ ಜನರ ನಂಬಿಕೆ.  1500 ಅಡಿ ಉದ್ದದ ಕೊಲೆರಾಡೊ ಸ್ಟ್ರೀಟ್ ಸೇತುವೆಯಿಂದ ಕೆಳಕ್ಕೆ ಹಾರಿ 150ಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದರು. ಹೀಗಾಗಿ ಈ ಸೇತುವೆ ಆತ್ಮಹತ್ಯೆಯ ಸೇತುವೆ ಎಂದೇ ಜನರ ಗಮನವನ್ನು ಸೆಳೆಯಿತು. ಮಹಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ  97 ವರ್ಷ ಪ್ರಾಚೀನವಾದ ಈ ಸೇತುವೆಯಿಂದ ಕೆಳಕ್ಕೆ ಬಿದ್ದು ಅನೇಕ ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. 

ಆದರೆ ಅದಾದ ನಂತರವೂ ಪ್ರತಿ ವರ್ಷ ಸುಮಾರು 10 ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 1993ರಲ್ಲಿ 8 ಅಡಿ ಎತ್ತರದ ಉಕ್ಕಿನ ತಡೆಗೋಡೆಯನ್ನು ಹಾಕಲಾಗಿದ್ದರೂ, ಆತ್ಮಹತ್ಯೆಯ ಪ್ರಮಾಣ ಮಾತ್ರ ಕಡಿಮೆಯಾಗಲಿಲ್ಲ.ಈ ಸೇತುವೆಯು ಆತ್ಮಹತ್ಯೆ ಸೇತುವೆಯಾಗಿರುವ ಹಿಂದೆ ಒಂದು ಕಥೆ ಹೆಣೆದುಕೊಂಡಿದೆ. ಕಟ್ಟಡ ರಚನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಸಿಮೆಂಟ್ ಮಿಶ್ರಣದ ಮೇಲೆ ಅಕಸ್ಮಾತ್ತಾಗಿ ಬಿದ್ದು ಪ್ರಾಣ ಕಳೆದುಕೊಂಡ. ಅವನ ದೇಹವನ್ನು ಮಿಶ್ರಣದಿಂದ ಹೊರತೆಗೆಯಲು ಉಳಿದ ಕಾರ್ಮಿಕರು ವಿಫಲರಾಗಿದ್ದರು.

ಕಾರ್ಮಿಕನ ಶವಕ್ಕೆ ಅಂತ್ಯಸಂಸ್ಕಾರವಾಗದೇ ಅವನ  ಪ್ರೇತಾತ್ಮ ಸೇತುವೆಯಲ್ಲಿ  ಅಡ್ಡಾಡುತ್ತಿದೆಯೆಂಬ ಪುಕಾರು ಹರಡಿತು. ಅಲ್ಲಿ ಸಂಚರಿಸುವ ಜನರಿಗೆ ಪ್ರೇತಾತ್ಮ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತದೆಂಬ ಊಹಾಪೋಹಗಳು ಹರಡಿತು. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಕೊಲೆರಾಡೊ ಸ್ಟ್ರೀಟ್ ಸೇತುವೆ ಸೂಸೈಡ್ ಬ್ರಿಜ್ ಎಂಬ ಅನ್ವರ್ಥನಾಮ ಪಡೆಯಿತು. ಹತ್ತಾರು ಪುರುಷರು ಮತ್ತು ಮಹಿಳೆಯರು ಈ ಸ್ಥಳದಲ್ಲಿ ಜೀವಕಳೆದುಕೊಂಡರು.
ಮುಂದಿನ ಪುಟ ನೋಡಿ

ಪಸಾಡೆನಾ ಸೆಂಟ್ರಲ್ ಲೈಬ್ರರಿಯ ದಾಖಲೆಗಳು ಇವನ್ನು ಸಾರಿ ಹೇಳುತ್ತವೆ. 1937ರ ಮೇ 1ರಂದು ತೀರಾ ಹತಾಶಳಾಗಿದ್ದ 22 ವರ್ಷ ವಯಸ್ಸಿನ ತಾಯಿ ಮಿರ್ಟಲ್ ವಾರ್ಡ್ ತನ್ನ ಮೂರು ವರ್ಷದ ಪುತ್ರಿಯ ಜೊತೆ ಸೇತುವೆಯಿಂದ ಹಾರಿದ್ದಳು.ತಾಯಿ ಮೃತಪಟ್ಟರೂ, ಮರದ ಕೊಂಬೆಗೆ ಸಿಕ್ಕಿಬಿದ್ದ ಪುತ್ರಿ ಕೆಳಗೆ ಬೀಳುವುದು ನಿಧಾನಗೊಂಡು ಜೀವವುಳಿಸಿಕೊಂಡಳು.

1930ರ ದಶಕದಲ್ಲಿ ಸೇತುವೆಯಿಂದ 79 ಜನರು ಸೇತುವೆಯಿಂದ ಕೆಳಕ್ಕೆ ಬಿದ್ದು ಪ್ರಾಣಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.ಸಾರ್ವಜನಿಕರ ಮನಃಪಟಲದಲ್ಲಿ ಸೇತುವೆ ಎಷ್ಟೊಂದು ಅಚ್ಚಳಿಯದ ನೆನಪು ಉಳಿಸಿತೆಂದರೆ  ಬೂಟು ದುರಸ್ತಿ ಮಾಡುವ ಸ್ಥಳೀಯ ಚಮ್ಮಾರನೊಬ್ಬ ಕವಿತೆಯೊಂದನ್ನು ಕೂಡ ರಚಿಸಿದ್ದ 
 
ನಾನು ಕೊಲೆರಾಡೋ ಸೇತುವೆಯಿಂದ ಹಾರುವುದಿಲ್ಲ, ಕಂದಕದಲ್ಲಿ ಬೀಳುವುದಿಲ್ಲ, ಕ್ಯಾಲಿಫೋರ್ನಿಯಾ ಸೂರ್ಯಕಿರಣ, ಪರ್ವತಗಳ ನೋಟ, ವೈನ್ ಮತ್ತು ಬಿಯರ್ ಸೆಳೆತವು ಇಲ್ಲಿಯೇ ಜೀವಿಸಲು ನನಗೆ ಕೊಡುತ್ತದೆ ಪ್ರೇರಣೆ ಎಂದು ಕವಿತೆಯಲ್ಲಿ ತಿಳಿಸಿದ್ದ.  

ವೆಬ್ದುನಿಯಾವನ್ನು ಓದಿ