ಟಿಬೆಟ್ ಸಮಸ್ಯೆ ಭಾರತಕ್ಕೆ ಕೂಡ ಸಮಸ್ಯೆಯೇ: ದಲಾಯಿ ಲಾಮಾ

ಗುರುವಾರ, 18 ಸೆಪ್ಟಂಬರ್ 2014 (17:01 IST)
ಟಿಬೆಟ್ ಎದುರಿಸುವ ಸಮಸ್ಯೆ ಭಾರತಕ್ಕೆ ಕೂಡ ಸಂಬಂಧಿಸಿದ ಸಮಸ್ಯೆಯೇ,ಇದನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಬೇಕಿದೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ( ಧರ್ಮಗುರು)  ದಲಾಯಿ ಲಾಮ ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿ ಲಾಮಾ ಈ ರೀತಿ ಹೇಳಿದ್ದಾರೆ. 
 
ವರದಿಗಾರರ ಜತೆ ಮಾತನಾಡುತ್ತಿದ್ದ ಲಾಮಾ "ಟಿಬೆಟ್ ಎದುರಿಸುವ ಸಮಸ್ಯೆ ಭಾರತಕ್ಕೆ ಕೂಡ ಸಮಸ್ಯೆಯೇ. ಮಾತುಕತೆ ಮೂಲಕ ಎಲ್ಲವನ್ನು ಅರ್ಥ ಮಾಡಿಕೊಳ್ಳಬಹುದು. ಪರಸ್ಪರ ನಂಬಿಕೆ ಆಧಾರದ ಮೇಲೆ ಚೀನಾ - ಭಾರತೀಯ ಸಂಬಂಧಗಳು ಬಹಳ ಮುಖ್ಯ" ಎಂದು ಹೇಳಿದ್ದಾರೆ. 
 
"ಆದಷ್ಟು ಬೇಗ ಅಥವಾ ಸ್ವಲ್ಪ ತಡವಾದರೂ ಸರಿ  ಟಿಬೆಟ್ ಸಮಸ್ಯೆಯನ್ನು ಪರಿಹರಿಸಬೇಕು. ಬಲ ಪೂರ್ವಕವಲ್ಲ. ಬದಲಾಗಿಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ. ಮಾತುಕತೆ ಮೂಲಕ ಎಲ್ಲವನ್ನು ಅರ್ಥ ಮಾಡಿಕೊಳ್ಳಬಹುದು".
 
"ಚೀನಾ ಸರ್ಕಾರ ಭಾರತ ದೇಶವನ್ನು ನೋಡಿ ಕಲಿಯ ಬೇಕು. 1950ಕ್ಕೂ ಮೊದಲು ಭಾರತ ಮತ್ತು ಚೀನಾ ಗಡಿಯಲ್ಲಿ ಓರ್ವ ಯೋಧ ಕೂಡ ಇರಲಿಲ್ಲ. ಆಗ ಎರಡು ದೇಶಗಳ ನಡುವೆ ಶಾಂತಿ, ಅಪಾರ ಗೌರವ ಮತ್ತು ನಂಬಿಕೆಗಳು ನೆಲೆಸಿದ್ದವು" ಎಂದು ಅವರು ತಿಳಿಸಿದ್ದಾರೆ.
 
"ಚೀನಾದ ಅಧ್ಯಕ್ಷ ಮುಕ್ತ ಮನಸ್ಸಿನವರಾಗಿದ್ದು, ಭಾರತದಿಂದ ಅವರು ಬಹಳಷ್ಟನ್ನು ಕಲಿತುಕೊಳ್ಳಬಹುದು" ಎಂದು ದಲಾಯಿ ಲಾಮಾ ಅಭಿಪ್ರಾಯಪಟ್ಟಿದ್ದಾರೆ. 
 
ಭಾರತೀಯ ಮತ್ತು ಚೀನೀ ನಾಯಕರು ಮಾತುಕತೆ ನಡೆಸುತ್ತಿದ್ದ ಸ್ಥಳದ ಹೊರ ಭಾಗದಲ್ಲಿ ನೂರಾರು ನಿರಾಶ್ರಿತ ಟಿಬೆಟಿಯನ್ನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತರನ್ನು ಚದುರಿಸಲು ದೆಹಲಿ ಪೊಲೀಸರು ಹರಸಾಹಸ ಪಡುತ್ತಿದ್ದು, ಕೆಲವೆಡೆ ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಅಲ್ಲದೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ