ಉತ್ತರ ಕೊರಿಯಾ ವಿರುದ್ಧ 20 ವರ್ಷಗಳಲ್ಲೇ ಕಠಿಣ ದಿಗ್ಬಂಧನಗಳಿಗೆ ಅಸ್ತು

ಗುರುವಾರ, 3 ಮಾರ್ಚ್ 2016 (13:54 IST)
ಉತ್ತರ ಕೊರಿಯಾ ವಿರುದ್ಧ 2 ದಶಕಗಳಲ್ಲೇ ಅತೀ ಕಠಿಣವಾದ ದಿಗ್ಬಂಧನಗಳನ್ನು ಹೇರಲು ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದನೆ ನೀಡಿದೆ.  ಎಲ್ಲಾ ರೀತಿಯ ಪರಮಾಣು ಸಂಬಂಧಿತ ಚಟುವಟಿಕೆ ನಿಷೇಧಿಸಿದ್ದರೂ  ಉತ್ತರ ಕೊರಿಯಾ ಅವಿಧೇಯತೆಯಿಂದ ಅಣ್ವಸ್ತ್ರ ಪರೀಕ್ಷೆ ಮತ್ತು ರಾಕೆಟ್ ಉಡಾವಣೆ ನಡೆಸಿದ ಕ್ರಮದಿಂದ ವಿಶ್ವಸಂಸ್ಥೆ ಕೋಪ ನೆತ್ತಿಗೇರಿದೆ.
 
ಹೊಸ ದಿಗ್ಬಂಧನಗಳನ್ನು ಕುರಿತು ಅಮೆರಿಕ ಮತ್ತು ಉತ್ತರ ಕೊರಿಯಾ ಸಾಂಪ್ರಾದಾಯಿಕ ಮಿತ್ರ ರಾಷ್ಟ್ರ ಚೀನಾ ಏಳು ವಾರಗಳ ಕಾಲ ಸಮಾಲೋಚನೆನಡೆಸಿದವು. ಉತ್ತರಕೊರಿಯಾದಿಂದ ನಿರ್ಗಮಿಸುವ ಮತ್ತು ಪ್ರವೇಶಿಸುವ ಸರಕುಗಳ ಕಡ್ಡಾಯ ತಪಾಸಣೆ, ಸಣ್ಣ ಶಸ್ತ್ರಗಳು ಮತ್ತು ಹಗುರ ಶಸ್ತ್ರಾಸ್ತ್ರಗಳನ್ನು ಉತ್ತರ ಕೊರಿಯಾಗೆ ಮಾರಾಟ ಅಥವಾ ವರ್ಗಾವಣೆ ನಿಷೇಧ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ನಿರತರಾದ ಉತ್ತರ ಕೊರಿಯಾ ರಾಜತಾಂತ್ರಿಕರ ಉಚ್ಚಾಟನೆ ಇವು ದಿಗ್ಬಂಧನಗಳಲ್ಲಿ ಸೇರಿವೆ. 
 
ಅಮೆರಿಕ, ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಮತ್ತು ಜಪಾನ್ ಹೊಸ ನಿರ್ಬಂಧಗಳಿಗೆ ಒತ್ತಾಯಿಸಿದವು. ಆದರೆ ಉ.ಕೊರಿಯಾ ನೆರೆರಾಷ್ಟ್ರ ಚೀನಾ ಉತ್ತರ ಕೊರಿಯಾದ ಸ್ಥಿರತೆಗೆ ಧಕ್ಕೆ ತಂದು ಅದರ ಅರ್ಥವ್ಯವಸ್ಥೆ ಕುಸಿಯುವ ಕ್ರಮಗಳಿಗೆ ಸುತಾರಾಂ ಒಪ್ಪಲಿಲ್ಲ. ಆದರೂ ಕೆಲವು ಆರ್ಥಿಕ ನಿರ್ಬಂಧಗಳಿಗೆ ಬೀಜಿಂಗ್ ಒಪ್ಪಿಗೆ ಸೂಚಿಸಿತು.

ಉತ್ತರ ಕೊರಿಯಾದ ಅಣ್ವಸ್ತ್ರ ಅಥವಾ ಕ್ಷಿಪಣಿ ಕಾರ್ಯಕ್ರಮಗಳಿಗೆ ನೆರವಾಗುವ ಕಲ್ಲಿದ್ದಲು, ಕಬ್ಬಿಣ ಮತ್ತು ಕಬ್ಬಿಣದ ಅದುರಿನ ರಫ್ತು ನಿಷೇಧಿಸುವ ನಿರ್ಣಯವನ್ನು ಅನುಮೋದಿಸಲಾಯಿತು.  ಅಂತಾರಾಷ್ಟ್ರೀಯ ಸಮುದಾಯ ಒಕ್ಕೊರಲಿನ ದನಿಯಲ್ಲಿ ಪ್ಯೋಂಗ್‌ಯಾಂಗ್‌‌ಗೆ ಸಂದೇಶ ಕಳಿಸಿದೆ. ಉತ್ತರ ಕೊರಿಯಾ ಅಪಾಯಕಾರಿ ಕಾರ್ಯಕ್ರಮಗಳನ್ನು ತ್ಯಜಿಸಿ ಜನರಿಗೆ ಉತ್ತಮ ಹಾದಿ ಕಲ್ಪಿಸಬೇಕೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

 ಉತ್ತರ ಕೊರಿಯಾ ವಿಭಜಿತ ರಾಷ್ಟ್ರ ದಕ್ಷಿಣ ಕೊರಿಯಾ ವಿರುದ್ಧ ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಇಳಿಯುತ್ತಿದೆ. ದಕ್ಷಿಣ  ಕೊರಿಯಾ ವಿರುದ್ಧ ಯುದ್ಧ ಮಾಡುವುದಕ್ಕೆ ಸಿದ್ಧತೆಗಳನ್ನು  ಕೂಡ ಮಾಡಿಕೊಂಡಿತ್ತು. ಆದರೆ ದಕ್ಷಿಣ ಕೊರಿಯಾಕ್ಕೆ ಅಮೆರಿಕ ಮುಂತಾದ ಮಿತ್ರರಾಷ್ಟ್ರಗಳ ಬೆಂಬಲವಿರುವುದು ಉತ್ತರ ಕೊರಿಯಾಕ್ಕೆ ಕೊಂಚ ಅಳುಕಾಗಿದೆ. 
 
 

ವೆಬ್ದುನಿಯಾವನ್ನು ಓದಿ