ರಷ್ಯಾ ಜೆಟ್ ವಿಮಾನ ಹೊಡೆದುರುಳಿಸಿದ ಟರ್ಕಿ: ಚಾಲಕರು ಜೀವಸಹಿತ ಪಾರು

ಮಂಗಳವಾರ, 24 ನವೆಂಬರ್ 2015 (15:51 IST)
ಸಿರಿಯಾ ಗಡಿಯಲ್ಲಿ ಐಸಿಸ್ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ ವಿಮಾನವನ್ನು ಟರ್ಕಿ ಹೊಡೆದುರುಳಿಸಿದೆ. ಟರ್ಕಿಯ ವಾಯುಗಡಿಯನ್ನು ವಿಮಾನ ಉಲ್ಲಂಘಿಸಿದ್ದರಿಂದ ತಾವು ಹೊಡೆದುರುಳಿಸಿದ್ದಾಗಿ ಟರ್ಕಿಯು ಹೇಳಿಕೊಂಡಿದ್ದು, ಇದು ಉಭಯ ರಾಷ್ಟ್ರಗಳ ನಡುವೆ ವೈಮನಸ್ಸಿಗೆ ಎಡೆಯಾಗಿದೆ.
 
ವಾಯು ಗಡಿ ಉಲ್ಲಂಘನೆಗಳ ಬಗ್ಗೆ 10 ಬಾರಿ ಜೆಟ್ ವಿಮಾನಕ್ಕೆ ಎಚ್ಚರಿಸಲಾಯಿತು. ಬಳಿಕ ಎಫ್-16 ಯುದ್ಧವಿಮಾನಗಳು ರಷ್ಯಾದ ಎಸ್‌ಯು-24 ಫೈಟರ್ ಜೆಟ್ ವಿಮಾನವನ್ನು ಹೊಡೆದುರುಳಿಸಿತು ಮತ್ತು ಟರ್ಕಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.  ಆದರೆ ವಿಮಾನವು ಸಿರಿಯಾ ವಾಯುಗಡಿಯನ್ನು ದಾಟಿ ಹೋಗಿರಲಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
 
 ವಿಮಾನದಲ್ಲಿದ್ದ ಪೈಲಟ್‌ಗಳು ವಿಮಾನದಿಂದ ಯಶಸ್ವಿಯಾಗಿ ಪ್ಯಾರಾಚೂಟ್ ನೆರವಿನಿಂದ ಧುಮುಕಿ ಪಾರಾಗಿರುವುದಾಗಿ ಸಚಿವಾಲಯ ಹೇಳಿದೆ. ಒಬ್ಬ ಪೈಲಟ್ ಸಿರಿಯಾದಲ್ಲಿ ಟರ್ಕಿ ಪಡೆಗಳ ವಶದಲ್ಲಿದ್ದು, ಇನ್ನೊಬ್ಬ ಪೈಲಟ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. 
 
 ಖಾಸಗಿ ಪ್ರಸಾರಕ ಹೇಬರ್‌ಟುಕ್ ಟಿವಿಯಲ್ಲಿ ಯುದ್ಧವಿಮಾನವು ಬೆಂಕಿಯಜ್ವಾಲೆಗೆ ಸಿಲುಕಿ ಕಾಡುಪ್ರದೇಶದಲ್ಲಿ ಬೀಳುತ್ತಿದ್ದು, ಅದರ ಹಿಂದೆ ದಟ್ಟವಾದ ಹೊಗೆ ಆವರಿಸಿಕೊಂಡಿದ್ದನ್ನು ತೋರಿಸಿದೆ. ಗಡಿಯ ಬಳಿ ಟರ್ಕ್‌ಮನ್ ಮೌಂಟೇನ್ ಎಂದು ಹೆಸರಾದ ಪ್ರದೇಶದಲ್ಲಿ ವಿಮಾನ ಉರುಳಿದೆ ಎಂದು ಹೆಬರ್‌ಟುರ್ಕ್ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ