ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಟ್ರಕ್ ಹರಿದು 12 ಸಾವು

ಮಂಗಳವಾರ, 20 ಡಿಸೆಂಬರ್ 2016 (11:52 IST)
ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಟ್ರಕ್ ಹರಿದು ಕನಿಷ್ಠ 12 ಜನರು ಮೃತಪಟ್ಟ ದಾರುಣ ಘಟನೆ ಜರ್ಮನಿಯ ಬರ್ಲಿನ್‌ನಲ್ಲಿ ನಡೆದಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. 
ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದುದರಿಂದ ಐಕೋನಿಕ್ ಕೈಸರ್ ವಿಲ್ಹೆಲ್ಮ್ ಮೊಮೋರಿಯಲ್ ಚರ್ಚ್ ಬಳಿಯ ಕ್ರಿಸ್‌ಮಸ್ ರಸ್ತೆಯಲ್ಲಿ ಜನಜಂಗುಳಿ ಇತ್ತು. ಈ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಟ್ರಕ್ ಚಲಾಯಿಸಿಕೊಂಡು ಬಂದ ದುಷ್ಕರ್ಮಿ ಅದನ್ನು ಜನರ ಮೇಲೆ ಹರಿಸಿದ್ದಾನೆ. 
 
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ರಕ್ತವೇ ಹರಿಯುತ್ತಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. 
 
ಇದೊಂದು ಉದ್ದೇಶಪೂರ್ವಕ ದಾಳಿ. ಉಗ್ರರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದು, ಲಾರಿಯನ್ನು ನಿರ್ಮಾಣ ಹಂತದ ಕಟ್ಟಡದ ಬಳಿಯಿಂದ ತರಲಾಗಿತ್ತು ಎಂದು ಹೇಳುತ್ತಿದ್ದಾರೆ.
 
ಘಟನೆಯ ಉದ್ದೇಶ ತಿಳಿದು ಬಂದಿಲ್ಲ, ತನಿಖೆ ನಡೆಸುತ್ತಿದ್ದು ಆ ಬಳಿಕವಷ್ಟೇ ಘಟನೆಯ ಹಿಂದಿನ ನಿಜವಾದ ಕಾರಣ ಹೊರಬೀಳಲಿದೆ ಎಂದು ಜರ್ಮನಿಯ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ