ಲಿಬ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮೇಲೆ ಅಮೆರಿಕ ದಾಳಿ, 43 ಸಾವು

ಶನಿವಾರ, 20 ಫೆಬ್ರವರಿ 2016 (18:27 IST)
ಅಮೆರಿಕದ ಯುದ್ಧವಿಮಾನಗಳು ಪಶ್ಚಿಮ ಲಿಬ್ಯಾದ ಇಸ್ಲಾಮಿಕ್ ಸ್ಟೇಟ್ ಶಂಕಿತ ಶಿಬಿರಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ನೆರೆಯ ಟುನಿಸಿಯಾದಲ್ಲಿ ಎರಡು ಮಾರಣಾಂತಿಕ ದಾಳಿಗಳಿಗೆ ಸಂಬಂಧಿಸಿದ್ದ ಉಗ್ರಗಾಮಿಯೊಬ್ಬ ಈ ದಾಳಿಯಲ್ಲಿ ಹತನಾಗಿದ್ದಾನೆ.

ಲಿಬ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮೇಲೆ ಮೂರು ತಿಂಗಳಲ್ಲಿ ಅಮೆರಿಕದ ಎರಡನೇ ವೈಮಾನಿಕ  ದಾಳಿಯಾಗಿದೆ. ಮುಮ್ಮರ್ ಗಡಾಫಿಯ ಪದಚ್ಯುತಿ ಹಿನ್ನೆಲೆಯಲ್ಲಿ ಉಂಟಾದ ಗೊಂದಲಗಳ ಲಾಭ ಪಡೆದ ಇಸ್ಲಾಮಿಸ್ಟ್ ಉಗ್ರರು ಲಿಬ್ಯಾದಲ್ಲಿ ನೆಲೆ ಸ್ಥಾಪಿಸಿ ತರಬೇತಿ ಶಿಬಿರಗಳನ್ನು ನಿರ್ಮಿಸಿಕೊಂಡಿದ್ದರು.

ಇಸ್ಲಾಮಿಕ್ ಸ್ಟೇಟ್ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿದ್ದಾಗಿ ಪೆಂಟಗನ್ ತಿಳಿಸಿದೆ. ಸಬ್ರತಾದಲ್ಲಿದ್ದ ಈ ಶಿಬಿರವು ಟುನಿಸಿಯಾ ಉಗ್ರ ನೌರೆದ್ದೀನ್ ಚೌಚಾನೆಗೆ ಸಂಬಂಧಿಸಿತ್ತು.ನೌರೆದ್ದೀನ್ ಕಳೆದ ವರ್ಷ ಟುನಿಸ್ ಮ್ಯೂಸಿಯಂ ಮತ್ತು ಸೌಸೆ ಬೀಚ್ ವಿಹಾರಧಾಮದ ಮೇಲೆ ದಾಳಿ ಮಾಡಿದ್ದರಿಂದ ಹತ್ತಾರು ಪ್ರವಾಸಿಗಳು ಅಸುನೀಗಿದ್ದರೆಂದು ಆರೋಪಿಸಲಾಗಿತ್ತು. ಶಿಬಿರದ ನಾಶ ಮತ್ತು ಚೌಚಾನೆಯ ಸಾವಿನಿಂದ ಲಿಬ್ಯಾದಲ್ಲಿ ಐಸಿಸ್ ಚಟುವಟಿಕೆ  ಮೇಲೆ ಪರಿಣಾಮ ಬೀರಲಿದೆ ಎಂದು ಪೆಂಟಗನ್ ಹೇಳಿದೆ.
 

ವೆಬ್ದುನಿಯಾವನ್ನು ಓದಿ