ಅಣ್ವಸ್ತ್ರಗಳ ಪ್ರಮಾಣ ತಗ್ಗಿಸಲು ಪಾಕಿಸ್ತಾನಕ್ಕೆ ಅಮೆರಿಕದ ಒತ್ತಡ

ಮಂಗಳವಾರ, 1 ಮಾರ್ಚ್ 2016 (17:46 IST)
ಪಾಕಿಸ್ತಾನದ ಬತ್ತಳಿಕೆಯಲ್ಲಿ ವೃದ್ಧಿಸುತ್ತಿರುವ ಅಣ್ವಸ್ತ್ರಗಳ ಭಂಡಾರವನ್ನು ಕುಂಠಿತಗೊಳಿಸುವಂತೆ ಅಮೆರಿಕ ಪಾಕಿಸ್ತಾನಕ್ಕೆ ಒತ್ತಡ ಹಾಕಿದೆ.  ಆದರೆ ಪಾಕಿಸ್ತಾನವು ಅದಕ್ಕೆ ಯಾವುದೇ ನಿರ್ಬಂಧ ಹಾಕಲು ನಿರಾಕರಿಸಿದ್ದು, ದಕ್ಷಿಣ ಏಷ್ಯಾದಲ್ಲಿ ಭದ್ರತಾ ಕಾಳಜಿಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಯನ್ನು ಅಮೆರಿಕಾ ತೋರಿಸಬೇಕು ಎಂದು ಹೇಳಿದೆ.
 
 ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ತಗ್ಗಿಸಲು ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಮತ್ತು ರಷ್ಯಾದ ಉದಾಹರಣೆ ನೀಡಿದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ, ಈ ವಾಸ್ತವತೆಯನ್ನು ಪಾಕಿಸ್ತಾನ ಅರಿತುಕೊಂಡು ಪರಮಾಣು ನೀತಿಯನ್ನು ಪರಾಮರ್ಶಿಸಬೇಕು ಎಂದು ಹೇಳಿದರು. 
 
 ಅಮೆರಿಕ-ಪಾಕಿಸ್ತಾನ ಆಯಕಟ್ಟಿನ ಮಾತುಕತೆಯ ಭಾಗವಾಗಿ ಸೋಮವಾರ ನಡೆದ ಭದ್ರತಾ ಚರ್ಚೆಯಲ್ಲಿ ಪರಮಾಣು ವಿಚಾರ ಚರ್ಚಿಸಲಾಯಿತು. ಪಾಕಿಸ್ತಾನ ಅತೀ ವೇಗವಾಗಿ ಅಣ್ವಸ್ತ್ರಗಳ ಸಂಗ್ರಹವನ್ನು ಬೆಳೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೆರಿ ಈ ವಿಷಯ ಪ್ರಸ್ತಾಪಿಸಿ ಪಾಕಿಸ್ತಾನ ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಅಣ್ವಸ್ತ್ರ ತಗ್ಗಿಸುವ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದರು. 
 

ವೆಬ್ದುನಿಯಾವನ್ನು ಓದಿ