ಅಣ್ವಸ್ತ್ರ ಸೀಮಿತಗೊಳಿಸಿ: ದೊಡ್ಡಣ್ಣನ ಸಲಹೆ ತಿರಸ್ಕರಿಸಿದ ಪಾಕ್

ಬುಧವಾರ, 21 ಸೆಪ್ಟಂಬರ್ 2016 (15:22 IST)
'ಅಣ್ವಸ್ತ್ರಗಳನ್ನು ಸೀಮಿತಗೊಳಿಸಿ', ಎಂದು ದೊಡ್ಡಣ್ಣ ಅಮೇರಿಕ ನೀಡಿದ ಸಲಹೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ. 

ಪಾಕ್ ಪ್ರಧಾನಿ ನವಾಜ್ ಷರೀಫ್, ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕೆರ್ರಿ ಈ ಸಲಹೆಯನ್ನು ನೀಡಿದ್ದರು.
 
ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯೂಯಾರ್ಕ್ ಪತ್ರಿಕಾಗೋಷ್ಠಿಯಲ್ಲಿ ಮಾತನ್ನಾಡುತ್ತಿದ್ದ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿಯಾಗಿರುವ ಮಲಿಹಾ ಲೋಧಿ ಹೇಳಿದ್ದಾರೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ.
 
ಕೆರ್ರಿ ಮತ್ತು ಷರೀಫ್ ಮಾತುಕತೆ ಸಂದರ್ಭದಲ್ಲಿ ಕೆರ್ರಿ, ಅಣ್ವಸ್ತ್ರ ಯೋಜನೆಗಳನ್ನು ತಗ್ಗಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ಷರೀಫ್ ನೀವು ಪಾಕಿಸ್ತಾನದಿಂದ ಏನನ್ನು ಬಯಸುತ್ತಿದ್ದಿರೋ, ಅದನ್ನು ಭಾರತ ಕೂಡ ಅನುಸರಿಸಬೇಕು ಎಂದು ಹೇಳಿದರು ಎಂದು ಲೋಧಿ ತಿಳಿಸಿದ್ದಾರೆ. 
 
ಭಾರತ ಕೈಗೊಳ್ಳುತ್ತಿರುವ ಅಣ್ವಸ್ತ್ರ ಚಟುವಟಿಗೆಗಳನ್ನು ಅಂತರಾಷ್ಟ್ರೀಯ ಸಮುದಾಯ ಮೊದಲು ತಡೆಯಬೇಕು ಎಂದು ಲೋಧಿ ಹೇಳಿದ್ದಾರೆ. 
 
ಇದೇ ವೇಳೆ ಮಾತನಾಡಿರುವ ಪಾಕ್ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌಧರಿ, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕೈಗೊಂಡಿರುವಷ್ಟು ಕ್ರಮಗಳನ್ನು ಜಗತ್ತಿನ ಯಾವ ದೇಶವು ಕೂಡ ಕೈಗೊಂಡಿಲ್ಲ ಎಂದು ಪ್ರತಿಪಾದಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ