ಪಾಕ್: ಹಾಟ್ ಹಾಟ್ ನಟಿ ವೀಣಾ ಮಲ್ಲಿಕ್‌ಗೆ 26 ವರ್ಷ ಜೈಲು ಶಿಕ್ಷೆ

ಬುಧವಾರ, 26 ನವೆಂಬರ್ 2014 (15:14 IST)
ಧರ್ಮವಿರೋಧಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕಾಗಿ ಪಾಕ್‌ನ ಬಹು ದೊಡ್ಡ ಮಾಧ್ಯಮ ಸಮೂಹ ಜಿಯೋ ಟಿವಿ ಮಾಲೀಕರನ್ನು ಸೇರಿದಂತೆ ನಟಿ ವೀಣಾ ಮಲ್ಲಿಕ್ ಮತ್ತು ಅವರ ಪತಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 26 ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದೆ. 

 
ಬಶೀರ್ ಮತ್ತು ಮಲಿಕ್ ಅವರ ಅಣಕು ಮದುವೆ ನಡೆಯುತ್ತಿದ್ದ ಸಮಯದಲ್ಲಿ ಧಾರ್ಮಿಕ ಹಾಡನ್ನು ಹಾಡಲಾಗಿತ್ತು. ಇದನ್ನು ಜಿಯೋ ದೂರದರ್ಶನ ಪ್ರಸಾರ ಮಾಡಿತ್ತು. ಅದು ಧರ್ಮವಿರೋಧಿ ಕಾರ್ಯಕ್ರಮ ಎಂದಿರುವ ನ್ಯಾಯಾಲಯ ಅದನ್ನು ಪ್ರಸಾರ ಮಾಡಲು ಅವಕಾಶ ನೀಡಿರುವ ಆರೋಪವನ್ನು ಜಿಯೋ ಮತ್ತು ಜಂಗ್ ಗುಂಪು ಮಾಲೀಕರಾದ ಮೀರ್ ಶಕೀಲ್ ಉರ್ ರಹಮಾನ್ ಮೇಲೆ ಹೊರಿಸಿದೆ.
 
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಶೈಶ್ತಾ ವಹೀದಿ ಸೇರಿದಂತೆ ವೀಣಾ ಮಲ್ಲಿಕ್ ಮತ್ತು ಆಕೆಯ ಪತಿ ಬಶೀರ್‌ಗೆ ಸಹ 26 ವರ್ಷಗಳ ದೀರ್ಘ ಕಾಲದ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಅಲ್ಲದೇ ಆರೋಪಿಗಳಿಗೆ 1.3 ಮಿಲಿಯನ್ ಪಾಕಿಸ್ತಾನಿ ರೂಪಾಯಿ ದಂಡವನ್ನು ಹೇರಲಾಗಿದ್ದು ಅದನ್ನು ಪಾವತಿಸಲು ವಿಫಲವಾದರೆ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ. 
 
ಈ ಎಲ್ಲಾ ನಾಲ್ಕು ಜನರು ಧರ್ಮನಿಂದನೆ ಮಾಡಿದ್ದಾರೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. 40 ಪುಟಗಳ ತೀರ್ಪು ನೀಡಿರುವ ನ್ಯಾಯಾಲಯ ದೋಷಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಪರಾಧಿಗಳು ಪ್ರಾದೇಶಿಕ ಹೈಕೋರ್ಟ್ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ.

ವೆಬ್ದುನಿಯಾವನ್ನು ಓದಿ