ಬರ್ಬರ ಐಎಸ್‌ ಭಯೋತ್ಪಾದಕರ ನಾಶ ನಮ್ಮ ಗುರಿ: ಒಬಾಮಾ

ಶನಿವಾರ, 27 ಫೆಬ್ರವರಿ 2016 (17:32 IST)
ಇರಾಕ್ ಮತ್ತು ಸಿರಿಯಾದಲ್ಲಿ ಅಟ್ಟಹಾಸ ಮೆರೆದಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು  ಬಗ್ಗುಬಡಿಯುವುದು ಕ್ಲಿಸ್ಟಕರವಾಗಿದ್ದರೂ ಅಮೆರಿಕವು ಬರ್ಬರ ಭಯೋತ್ಪಾದಕ ಸಂಘಟನೆಯನ್ನು ನಾಶ ಮಾಡುತ್ತದೆಂದು ಅಧ್ಯಕ್ಷ ಬರಾಕ್ ಒಬಾಮಾ ಗುಡುಗಿದ್ದಾರೆ. ಸಿರಿಯಾದ ಸಂಘರ್ಷವನ್ನು ಕೊನೆಗೊಳಿಸುವುದು ತಮ್ಮ ಗುರಿ ಎಂದು ಒಬಾಮಾ ಹೇಳಿದರು. ಐಎಸ್‌ಐಎಲ್ ವಿರುದ್ಧ ಹೋರಾಟವು ಕಷ್ಟಕರವಾಗಿ ಉಳಿದಿದೆ. ಆದರೆ ನಾವು ರಾಷ್ಟ್ರೀಯ ಶಕ್ತಿಯ ಎಲ್ಲಾ ಅಂಶಗಳನ್ನು ಜತೆಗೆ ಸಮುದಾಯಗಳ ಬಲವನ್ನು ಅಮೆರಿಕನ್ನರಾಗಿ ನಮ್ಮ ಮೌಲ್ಯಗಳನ್ನು ಬಳಸಿಕೊಂಡು ಹೋರಾಟ ಮುಂದುವರಿಸುತ್ತೇವೆ ಎಂದು ಒಬಾಮಾ ಹೇಳಿದರು.
 
ಉತ್ತಮ, ಸುರಕ್ಷಿತ ಭವಿಷ್ಯಕ್ಕಾಗಿ ನಾವು ಜಗತ್ತಿನ ಜನರಿಗೆ ಒತ್ತಾಸೆಯಾಗಿ ನಿಂತು ಬರ್ಬರ ಭಯೋತ್ಪಾದನೆ ಸಂಘಟನೆಯನ್ನು ನಾಶ ಮಾಡುತ್ತೇವೆ ಎಂದು ವಾರಾಂತ್ಯದ ಭಾಷಣದಲ್ಲಿ ಮಾತನಾಡುತ್ತಾ ಒಬಾಮಾ ಹೇಳಿದರು.
 
 ಐಎಸ್ ಸಂಘಟನೆಯನ್ನು ನಾಶ ಮಾಡುವ ಯೋಜನೆ ಕ್ಲಿಷ್ಟಕರವಾಗಿದ್ದು, ಸಿರಿಯಾ ಮತ್ತು ಇರಾಕ್‌ನಲ್ಲಿ ಜಟಿಲ ಪರಿಸ್ಥಿತಿ ಉದ್ಭವಿಸಿದೆ. ಸಿರಿಯಾದಲ್ಲಿ ಅಮೆರಿಕದ ಕಮಾಂಡೊಗಳು ಸಿರಿಯನ್ ಡೆಮಾಕ್ರಟಿಕ್ ಪಡೆಗಳು ಎಂಬ ಕುರ್ದಿ ಗುಂಪು ಸೇರಿದಂತೆ ಐಎಸ್ ವಿರೋಧಿ ಹೋರಾಟಗಾರರ ಜತೆ ಕೈಗೂಡಿಸಿದೆ. ಐಎಸ್ ಅಮಾಯಕ ನಾಗರಿಕರನ್ನು ಮಾನವ ರಕ್ಷಾಕವಚವಾಗಿ ಬಳಸುತ್ತಿದೆ. ಈ ಸವಾಲುಗಳ ನಡುವೆಯೂ ನಾವು ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಒಬಾಮಾ ವಿವರಿಸಿದರು. 
 
66 ಸದಸ್ಯ ರಾಷ್ಟ್ರಗಳ ಸಮ್ಮಿಶ್ರ ಕೂಟವು ಬಲವಾಗಿ ಬೆಳೆಯುತ್ತಿದ್ದು, ಹೋರಾಟಕ್ಕೆ ಹೆಚ್ಚೆಚ್ಚು ರಾಷ್ಟ್ರಗಳು ಕೊಡುಗೆ ನೀಡುತ್ತಿವೆ ಎಂದು ಹೇಳಿದರು. ಇರಾಕ್‌ನಲ್ಲಿ ಐಎಸ್‌ಐಎಲ್ ಶೇ. 40ಕ್ಕಿಂತ ಹೆಚ್ಚು ಪ್ರದೇಶಗಳನ್ನು ಕಳೆದುಕೊಂಡಿದೆ. ಸಿರಿಯಾದಲ್ಲಿ ಸ್ಥಳೀಯ ಪಡೆಗಳ ಸಮ್ಮಿಶ್ರ ಕೂಟವು ಐಎಸ್ ಭದ್ರಕೋಟೆ ರಕ್ಕಾದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದೆ. ತೈಲ ಸೌಲಭ್ಯಗಳ ಮೇಲೆ ಬಾಂಬ್ ದಾಳಿ ಮಾಡಿದ ಮೇಲೆ ಐಎಸ್ ಸಂಘಟನೆಯಲ್ಲಿ ಕಾರ್ಯನಿರ್ವಹಿಸುವ ಉಗ್ರರ ವೇತನವನ್ನು ಕಡಿತ ಮಾಡಿದೆ ಎಂದು ಒಬಾಮಾ ಹೇಳಿದರು. 
 
 

ವೆಬ್ದುನಿಯಾವನ್ನು ಓದಿ