ಭಾರತ ಯುದ್ಧ ಹೇರಿದಲ್ಲಿ ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ: ಪಾಕ್ ರಕ್ಷಣಾ ಸಚಿವ

ಗುರುವಾರ, 3 ಸೆಪ್ಟಂಬರ್ 2015 (19:27 IST)
ಭಾರತ-ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚುತ್ತಿರುವ ಉದ್ರಿಕ್ತತೆಯ ಮಧ್ಯೆ, ಪಾಕ್ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
 
ಒಂದು ವೇಳೆ ಭಾರತ, ನೆರೆಯ ರಾಷ್ಟ್ರವಾದ ಪಾಕಿಸ್ತಾನದ ಮೇಲೆ ಯುದ್ಧ ಹೇರಿದಲ್ಲಿ ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.  
 
ಭಾರತದ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್, ಭವಿಷ್ಯದಲ್ಲಿ ಸೇನಾಪಡೆಗಳು ಕಡಿಮೆ ಅವಧಿಯ ಯುದ್ಧಕ್ಕೆ ಸಿದ್ದರಾಗಿರಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ಪಾಕ್ ರಕ್ಷಣಾ ಸಚಿವರ ಹೇಳಿಕೆ ಹೊರಬಿದ್ದಿದೆ. 
 
ಪಾಕಿಸ್ತಾನದ ರೇಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕ್ ಶಾಂತಿಯಲ್ಲಿ ನಂಬಿಕೆಯಿಡುತ್ತದೆ. ಒಂದು ವೇಳೆ ಯಾವ ದೇಶವಾದರೂ ಆಕ್ರಮಣ ಮಾಡಿದಲ್ಲಿ ಆಕ್ರಮಕಾರಿಯಾಗಿಯೇ ತಿರುಗೇಟು ನೀಡಲು ಸಿದ್ದವಾಗಿದೆ ಎಂದು ಹೇಳಿದ್ದಾರೆ. 
 
ಕಳೆದ 50 ವರ್ಷಗಳ ಹಿಂದಿನ ಯುದ್ಧದಲ್ಲಿ ಪಾಕ್ ಸೋತಿರಬಹುದು. ಇದೀಗ ಪಾಕ್ ಸೇನೆ ತುಂಬಾ ಅನುಭವಿಯಾಗಿದೆ. ಭಯೋತ್ಪಾದಕರ ವಿರುದ್ಧ ಸಮರ ಸಾರಿ ಅನುಭವ ಪಡೆದಿದ್ದೇವೆ. ಯಾವುದೇ ಸವಾಲ್ ಎದುರಿಸಲು ಪಾಕ್ ಸೇನೆ ಸಜ್ಜಾಗಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಗುಡುಗಿದ್ದಾರೆ.
 

ವೆಬ್ದುನಿಯಾವನ್ನು ಓದಿ