ಮಳೆ ಕೊರತೆ: ದೇಶದ ಆರ್ಥಿಕತೆ ಮೇಲೆ ಹೊಡೆತ?

ಮಂಗಳವಾರ, 23 ಜೂನ್ 2009 (18:15 IST)
ಜೂನ್ ತಿಂಗಳಲ್ಲಿ ಪ್ರತೀ ವರ್ಷಕ್ಕಿಂತ ಶೇಕಡಾ 55ಕ್ಕಿಂತಲೂ ಕಡಿಮೆ ಮುಂಗಾರು ಮಳೆಯನ್ನೆದುರಿಸುತ್ತಿರುವ ಕಾರಣದಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣಾ ತತ್ವಕ್ಕೆ ಹೊಡೆತ ಬೀಳಲಿದೆ ಎಂಬ ಕಳವಳಗಳ ನಡುವೆಯೇ, ಮುಂಗಾರು ಮಳೆಯ ಪ್ರಗತಿ ಮತ್ತು ಮಳೆಯ ಕೊರತೆ ಬಗ್ಗೆ ಹವಾಮಾನ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲು ಸಭೆ ಕರೆಯಲಾಗಿದೆ.

ಮುಂಗಾರು ವಿಳಂಬದ ಕಾರಣದಿಂದ ದೇಶದ ಅರ್ಥವ್ಯವಸ್ಥೆ ಅಲ್ಲೋಲಕಲ್ಲೋಲವಾದ ಇತಿಹಾಸವನ್ನೇ ನಾವು ಕಂಡಿದ್ದೇವೆ. ಅದೆಷ್ಟೋ ರೈತರನ್ನು ಆತ್ಮಹತ್ಯೆಗಳಿಗೆ ನೂಕಿದ್ದು ಇದೇ ಮುಂಗಾರು ಎಂಬುದೂ ಜನಜನಿತ. ಅನಾವೃಷ್ಟಿಯಿಂದಾದ ಬಾಧಕಗಳಿಗೆ ಸರಕಾರಗಳು ಹೊಣೆಯಾಗುವುದು ಕೂಡ ಕೇವಲ ಇಂದು-ನಿನ್ನೆಗೆ ಸೀಮಿತವಾಗಿರದ ವಿಚಾರ. ಹಾಗಾಗಿ ಈಗಿನ ಸರಕಾರವೂ ಕಳವಳಗೊಂಡಿಲ್ಲ ಎಂದು ಹೇಳಲಾಗದು ಎನ್ನುವುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯ.

ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಮುಂಗಾರು ಮಳೆ ತಡವಾಗಿರುವ ಕಾರಣದಿಂದ ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದಿದ್ದಾರೆ.

ಮಂಗಳವಾರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, "ಮುಂಗಾರು ಕೆಲವು ವಾರಗಳ ವಿಳಂಬವಾಗುವುದು ಸಾಮಾನ್ಯ. ಇದರಿಂದ ದೇಶದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮವಾಗದು" ಎಂದರು.

ಆದರೆ ಅತ್ತ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳ ರಾಜ್ಯ ಸಚಿವ ಪೃಥ್ವಿರಾಜ್ ಚೌಹಾನ್ ಮುಂಗಾರು ಮಳೆಯ ಪ್ರಗತಿ ಮತ್ತು ಮಳೆಯ ಕೊರತೆ ಬಗ್ಗೆ ಹವಾಮಾನ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲು ಸಭೆ ಕರೆದಿರುವುದು ಕೇಂದ್ರ ಸರಕಾರ ಚಿಂತಿತವಾಗಿದೆ ಎಂಬುದನ್ನು ಎತ್ತಿ ತೋರಿಸಿದೆ.

ಚೌಹಾನ್ ಮಂಗಳವಾರ ನವದೆಹಲಿಯ ಮೌಸಮ್ ಭವನದಲ್ಲಿ ಹವಾಮಾನ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸಾಧಕ-ಬಾಧಕದ ಕುರಿತು ಚರ್ಚೆ ನಡೆಸಿದರು. ಅಲ್ಲದೆ ಜೂನ್ ಒಂದರಿಂದ 17ರ ನಡುವೆ ಬೀಳಬೇಕಾಗಿದ್ದ ಸಾಮಾನ್ಯ ಮಳೆಯ ಶೇಕಡಾ 45ರಷ್ಟು ಮಾತ್ರ ಬಿದ್ದಿರುವ ಕಾರಣ ಪ್ರಧಾನ ಮಂತ್ರಿಗಳ ಕಾರ್ಯಾಲಯವು ಮುಂಗಾರು ಪ್ರಗತಿಯನ್ನು ನೇರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಇದೇ ಹೊತ್ತಿಗೆ ಹವಾಮಾನ ಇಲಾಖೆಯು ಎಲ್ ನಿನೋ ಬಗ್ಗೆಯೂ ಭೀತಿ ವ್ಯಕ್ತಪಡಿಸಿದೆ. ಮುಂಗಾರು ಮಳೆಯನ್ನು ಸಂಪೂರ್ಣ ಬರಿದಾಗಿಸುವ ಶಕ್ತಿಯನ್ನು ಇದು ಹೊಂದಿದೆ ಎನ್ನುವುದು ತೀರಾ ಹೊಸ ವಿಚಾರವಲ್ಲ. ಹಾಗಾಗಿ ಮುಂಗಾರು ಸಾಮರ್ಥ್ಯವನ್ನು ಕುಗ್ಗಿಸಿರುವ ಬಗ್ಗೆಯೂ ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ.

2009ರಲ್ಲಿ ಎಲ್ ನಿನೋ ಬಾಧಿಸುವ ಸಾಧ್ಯತೆ ಶೇಕಡಾ 50ಕ್ಕಿಂತಲೂ ಹೆಚ್ಚು ಎಂದು ಈ ಹಿಂದೆಯೇ ವಿಶ್ವ ಹವಾಮಾನ ಸಂಸ್ಥೆಯು ಎಚ್ಚರಿಕೆಯನ್ನು ಕೂಡ ನೀಡಿತ್ತು. ಇದು ಇತರ ಯಾವುದೇ ವರ್ಷಗಳಿಗಿಂತ ದುಪ್ಪಟ್ಟು ಎನ್ನುವುದು ಗಮನಾರ್ಹ. ಜತೆಗೆ ಐಲಾ ಚಂಡ ಮಾರುತ ಕೂಡ ಮುಂಗಾರು ದುರ್ಬಲವಾಗಲು ಕಾರಣವಾಗಿರಬಹುದು ಎಂದು ಕೂಡ ಸಂಶಯ ವ್ಯಕ್ತಪಡಿಸಲಾಗಿದೆ.

ಇತ್ತ ಭಾರತದ ಹವಾಮಾನ ಇಲಾಖೆಯ 36 ಉಪವಿಭಾಗಗಳಲ್ಲಿ 28 ಮಳೆಯ ಕೊರತೆಯಾಗಿರುವುದನ್ನು ದಾಖಲಿಸಿವೆ. ಆದರೆ 2008ರಲ್ಲಿ ಕೇವಲ ನಾಲ್ಕು ಉಪವಿಭಾಗಗಳು ಮಾತ್ರ ಈ ವರದಿಯನ್ನು ನೀಡಿದ್ದವು.

ಇದೇ ಕಾರಣದಿಂದ ಉತ್ತರ ಭಾರತ ಅನಾವೃಷ್ಟಿಗೊಳಗಾಗಿದೆ ಎಂಬ ವಾದಗಳನ್ನು ಹವಾಮಾನ ಇಲಾಖೆ ತಳ್ಳಿ ಹಾಕಿದೆ.

"ಉತ್ತರ ಭಾರತದಲ್ಲಿ ಮುಂಗಾರು ವಿಳಂಬವಾಗಿಲ್ಲ. ಇಲ್ಲಿ ಕೇವಲ ಶೇಕಡಾ 50ರಷ್ಟು ಮಾತ್ರ ಮಳೆಯಲ್ಲಿ ಕಡಿತ ಕಂಡು ಬಂದಿದೆ. ಅದರ್ಥ ಕ್ಷಾಮವೆಂದು ತಿಳಿದುಕೊಳ್ಳಬೇಕಿಲ್ಲ. ಜುಲೈನಲ್ಲಿ ಸಾಕಷ್ಟು ಮಳೆಯಾದಲ್ಲಿ ಅದು ಜೂನ್ ತಿಂಗಳಿನ ಮಳೆ ಬರವನ್ನು ಸರಿದೂಗಿಸಲಿದೆ. ಯಾವುದಕ್ಕೂ ನಾವು ಜೂನ್ 25ರಂದು ಈ ಬಗ್ಗೆ ವಿಸ್ತೃತ ವರದಿ ಬಿಡುಗಡೆ ಮಾಡುತ್ತೇವೆ" ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ.ಪಿ. ಯಾದವ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ