ಅಕ್ಷಯ ತೃತೀಯ: ಚಿನ್ನಾಭರಣಗಳ ಮಾರಾಟದಲ್ಲಿ ಶೇ.40ರಷ್ಟು ಹೆಚ್ಚಳ

ಸೋಮವಾರ, 2 ಮೇ 2011 (11:57 IST)
PTI
ಚಿನ್ನಾಭರಣಗಳ ದರ ಏರಿಕೆಯ ಮಧ್ಯೆಯು ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಯಲ್ಲಿ, ಚಿನಿವಾರಪೇಟೆಯ ವಹಿವಾಟಿನಲ್ಲಿ ಶೇ.40ರಷ್ಟು ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರ ಚಿನ್ನದ ದರ ಪ್ರತಿ 10 ಗ್ರಾಂಗೆ 23,000 ರೂಪಾಯಿಗಳಿಗೆ ಏರಿಕೆಯಾಗಿದ್ದರೂ,ಗ್ರಾಹಕರಿಂದ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಚಿನ್ನ ಬೆಳ್ಳಿ ವಹಿವಾಟಿನಲ್ಲಿ ಶೇ.40ರಷ್ಟು ಏರಿಕೆಯಾಗಬಹುದು ಎಂದು ಆಲ್-ಇಂಡಿಯಾ ಜೆಮ್ಸ್ ಆಂಡ್ ಜೆವೆಲ್ಲರಿ ಫೆಡರೇಶನ್ ಮುಖ್ಯಸ್ಥ ಬಚ್ಚರಾಜ್ ಬಾಮಲ್ವಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ವರ್ಷದ ಅಕ್ಷಯ ತೃತೀಯ ಹಬ್ಬದ ನಂತರ ಚಿನ್ನಾಭರಣಗಳ ದರಗಳಲ್ಲಿ ಶೇ.25 ರಷ್ಟು ಏರಿಕೆಯಾಗಿದೆ. ಆಭರಣಗಳ ಮಾರಾಟದಲ್ಲಿ ಕೂಡಾ ಶೇ.15ರಷ್ಟು ಹೆಚ್ಚಳವಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕಳೆದ ಏಪ್ರಿಲ್ 30 ರಂದು ಮುಂಬೈಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 22,815 ರೂಪಾಯಿಗಳಿಗೆ ತಲುಪಿತ್ತು. ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ ದಾಖಲೆಯ 23,175 ರೂಪಾಯಿಗಳಿಗೆ ಏರಿಕೆಯಾಗಿತ್ತು.

ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,570.60 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ