ಆರ್ಥಿಕ ಕುಸಿತದಿಂದ ಉದ್ಯೋಗಿಗಳಿಗೆ ತೊಂದರೆಯಿಲ್ಲ

ಗುರುವಾರ, 20 ನವೆಂಬರ್ 2008 (11:47 IST)
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಅಭಿವೃದ್ಧಿ ದರ ಶೇ.7ರ ಗಡಿಯನ್ನು ದಾಖಲಿಸುವ ನಿರೀಕ್ಷೆಯಿರುವುದರಿಂದ ಹುದ್ದೆಗಳ ಸೃಷ್ಟಿಯಲ್ಲಿ ಇಳಿಕೆಯಾಗಬಹುದು. ಆದರೆ ಸಂಪೂರ್ಣವಾಗಿ ಪರಿಣಾಮ ಬೀರುವುದಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

ದೇಶದ ಅಭಿವೃದ್ಧಿ ದರ ಶೇ. 9 ರಿಂದ ಶೇ.7 ಕ್ಕೆ ಇಳಿಕೆಯಾದಲ್ಲಿ ನೂತನ ಹುದ್ದೆಗಳ ಸೃಷ್ಟಿಯಲ್ಲಿ ಕಡಿತವಾಗಬಹುದು. ಆದರೆ ಇದರಿಂದ ಹೆಚ್ಚಿನ ಪರಿಣಾಮವಾಗುತ್ತದೆ ಎಂದು ನಾನು ಭಾವಿಸಿಲ್ಲ ಎಂದು ಆಹ್ಲುವಾಲಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರ್ಥಿಕತೆಯ ಕುಸಿತದಿಂದಾಗಿ, ಉದ್ಯೋಗ ಸೃಷ್ಟಿ ಹಾಗೂ ಸ್ವತಂತ್ರ ನಿರ್ವಹಣಾ ಕಂಪೆನಿಗಳು ಮತ್ತು ಇನ್ನಿತರ ಕೆಲ ಕ್ಷೇತ್ರಗಳ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತವಾಗಬಹುದು. ಆದರೆ ದೇಶದ ಸಂಪೂರ್ಣ ಉದ್ಯೋಗಿಗಳು ಬಿಕ್ಕಟ್ಟನ್ನು ಎದುರಿಸಲಿದ್ದಾರೆ ಎನ್ನುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದಾರೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಸಿಟಿ ಗ್ರೂಪ್‌ 50 ಸಾವಿರ ನೌಕರರನ್ನು ವಜಾಗೊಳಿಸಲು ಆದೇಶ ಹೊರಡಿಸಿದೆ. ಅದರಂತೆ ಡನ್‌ಲಪ್ 1200 ನೌಕರರನ್ನು ವಜಾಗೊಳಿಸಿದ್ದು, ಅನೇಕ ಕಂಪೆನಿಗಳು ನೌಕರರನ್ನು ವಜಾಗೊಳಿಸಿ ಆದೇಶ ಹೊರಡಿಸಿವೆ.

ಆದರೆ ಜಾಗತಿಕ ಆರ್ಥಿಕ ಬಿಕ್ಕಟ್ಟು ದೇಶದ ಆರ್ಥಿಕತೆಯ ಮೇಲೆ ಅಲ್ಪ ಪರಿಣಾಮ ಬೀರಿರುವುದರಿಂದ ಹೆಚ್ಚಿನ ಹುದ್ದೆಗಳ ಕಡಿತದ ಅಗತ್ಯವಿಲ್ಲ ಎಂದು ಮೊಂಟೆಕ್‌ ಸಿಂಗ್ ಆಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ