ಎಣ್ಣೆಕಾಳು, ಕಬ್ಬು ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಶನಿವಾರ, 23 ಮಾರ್ಚ್ 2013 (14:04 IST)
ಬತ್ತ, ಗೋಧಿ, ಬೇಳೆಕಾಳು ಉತ್ಪಾದನೆ ಸಾಮರ್ಥ್ಯದಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ. ಎಣ್ಣೆಕಾಳು, ಕಬ್ಬಿನ ವಿಚಾರಕ್ಕೆ ಬಂದರೆ ಭಾರತವೇ ಮೊದಲ ಸ್ಥಾನದಲ್ಲಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವ ತಾರಿಕ್ ಅನ್ವರ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ವರದಿ ಪ್ರಕಾರ, ಭಾರತದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 3,590 ಕೆ.ಜಿ ಬತ್ತ ಬೆಳೆಯಲಾಗುತ್ತದೆ. ಆದರೆ, ಚೀನಾ ಒಂದು ಹೆಕ್ಟೇರ್ ಪ್ರದೇಶದಲ್ಲಿ 6,686 ಕೆ.ಜಿ ಬತ್ತ ಬೆಳೆಯುತ್ತದೆ. ಚೀನಾ ಮಾತ್ರವಲ್ಲ ನೆರೆಯ ಬಾಂಗ್ಲಾದೇಶ (4,219 ಕೆ.ಜಿ), ಮ್ಯಾನ್ಮಾರ್‌ಗೆ (4,081 ಕೆ.ಜಿ) ಹೋಲಿಸಿದರೂ ಭಾರತದಲ್ಲಿ ಬತ್ತದ ಇಳುವರಿ ಕಡಿಮೆ ಇದೆ. ಭಾರತದಲ್ಲಿ ಒಂದು ಹೇಕ್ಟರ್ ಪ್ರದೇಶದಲ್ಲಿ 1,661 ಕೆ.ಜಿ ಗೋಧಿ ಬೆಳೆದರೆ, ಚೀನಾದಲ್ಲಿ 4,838 ಕೆ.ಜಿ ಇಳುವರಿ ಬರುತ್ತದೆ.

ಚೀನಾದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 5,470ಕೆ.ಜಿಯಷ್ಟು ದ್ವಿದಳ ಧಾನ್ಯ ಮತ್ತು 1,533 ಕೆ.ಜಿಯಷ್ಟು ಏಕದಳ ಧಾನ್ಯ ಉತ್ಪಾದನೆ ಆದರೆ, ಭಾರತದಲ್ಲಿ ಇದು ಕ್ರಮವಾಗಿ 1,591 ಮತ್ತು 699 ಕೆ.ಜಿ.ಯಷ್ಟಿದೆ. ಭಾರತದ ಬೇಳೆಕಾಳು ಉತ್ಪಾದನೆ ಸಾಮರ್ಥ್ಯವು ನೆರೆಯ ಆರು ದೇಶಗಳಿಗಿಂತ ಕಡಿಮೆ ಇದೆ. ಆದರೆ, ಪಾಕಿಸ್ತಾನಕ್ಕೆ ಹೋಲಿಸಿದರೆ ಇದು ಹೆಚ್ಚಿದೆ.

ಭಾರತದಲ್ಲಿ ಪ್ರತಿ ಹೆಕ್ಟೇರ್‌ಗೆ 71,668 ಕೆ.ಜಿ ಕಬ್ಬು ಮತ್ತು 1,133 ಕೆ.ಜಿ ಎಣ್ಣೆಕಾಳು ಬೆಳೆದರೆ ಚೀನಾದಲ್ಲಿ ಇದು ಕ್ರಮವಾಗಿ 66,519 ಮತ್ತು 619 ಕೆ.ಜಿ.ಯಷ್ಟಿದೆ.

ದೇಶದ ಕೃಷಿ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಇಳುವರಿ ಸಾಮರ್ಥ್ಯ ಹೊಂದಿರುವ 645 ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಾರಿಕ್ ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ