ಗುರುತು ಚೀಟಿಯಲ್ಲಿ ಮೈಕ್ರೋಸಾಫ್ಟ್: ಗೇಟ್ಸ್ ಬಯಕೆ

ಶುಕ್ರವಾರ, 24 ಜುಲೈ 2009 (19:47 IST)
ಪ್ರತಿ ನಾಗರಿಕರಿಗೆ ನೀಡಲಾಗುವ ಭಾರತದ ವಿಶಿಷ್ಟ ಬಹುಪಯೋಗಿ ಗುರುತಿನ ಚೀಟಿ ಯೋಜನೆಯಲ್ಲಿ ಪಾಲುದಾರನಾಗಲು ಮೈಕ್ರೋಸಾಫ್ಟ್ ಬಯಸುತ್ತಿದೆ ಎಂದು ವಿಶ್ವದ ಸಾಫ್ಟ್‌ವೇರ್ ದೈತ್ಯ ಸಂಸ್ಥೆಯ ಅಧ್ಯಕ್ಷ ಬಿಲ್ ಗೇಟ್ಸ್ ತಿಳಿಸಿದ್ದಾರೆ.

"ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಯೋಜನೆಯ ಭಾಗವಾಗಲು ಮೈಕ್ರೋಸಾಫ್ಟ್ ಕಾತರದಿಂದಿದೆ" ಎಂದು ಭಾರತ ಪ್ರವಾಸದಲ್ಲಿರುವ ಗೇಟ್ಸ್ ತಿಳಿಸಿದ್ದಾರೆ.

ಈ ಸಂಬಂಧ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ಎಂ. ನಿಲೇಕಣಿಯವರನ್ನು ಭೇಟಿ ಮಾಡಿ, ಪಾಲುದಾರಿಕೆಯ ಬಗ್ಗೆ ಚರ್ಚಿಸುವುದಾಗಿ ಗೇಟ್ಸ್ ವಿವರಣೆ ನೀಡಿದರು.

ನಿಲೇಕಣಿಯವರು ಗುರುವಾರವಷ್ಟೇ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲದೆ ಮುಂದಿನ 12ರಿಂದ 18 ತಿಂಗಳುಗಳ ಅವಧಿಯಲ್ಲಿ ಮೊದಲ ಹಂತದ ಗುರುತಿನ ಚೀಟಿಯನ್ನು ನಾಗರಿಕರಿಗೆ ವಿತರಿಸುವ ಭರವಸೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದರು.

ಸರಕಾರವು ನೀಡಲುದ್ದೇಶಿಸಿರುವ ಮಹತ್ವಾಕಾಂಕ್ಷೆಯ ಈ ಕಂಪ್ಯೂಟರೀಕೃತ ಗುರುತಿನ ಚೀಟಿಯಲ್ಲಿ ನಾಗರಿಕ ಆರ್ಥಿಕ ವಿವರ, ವಿದ್ಯಾಭ್ಯಾಸ, ಆರೋಗ್ಯ ಸಂಬಂಧಿ ವಿವರಣೆ ಸೇರಿದಂತೆ ಸರಕಾರಿ ಹಾಗೂ ಖಾಸಗಿ ವಲಯಕ್ಕೆ ಉಪಯೋಗಕ್ಕೆ ಬರುವ ಎಲ್ಲಾ ಅಗತ್ಯ ವಿವರಣೆಗಳು ಒಳಗೊಂಡಿರುತ್ತವೆ. ಇಲ್ಲಿ ಪ್ರತಿ ನಾಗರಿಕನಿಗೆ 16 ಅಂಕಿಗಳುಳ್ಳ ಸಂಖ್ಯೆನ್ನು ನೀಡಲಾಗುತ್ತದೆ.

ವಿದೇಶಿ ಉದ್ಯೋಗಿಗಳಿಗೆ ಅಮೆರಿಕಾವು ನಿರ್ಬಂಧ ಹೇರುವ ನಿರ್ಧಾರ ಕೈಗೊಂಡಲ್ಲಿ ಅದು ಅತಿ ದೊಡ್ಡ ತಪ್ಪೆಸಗಿದಂತಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಭಾರತೀಯರನ್ನು ಅವರು ಜಾಣರು ಎಂದೂ ಸಂಬೋಧಿಸಿದರು. ಅಂತವರಿಗೆ ರಿಯಾಯಿತಿ ಯಾಕೆ ನೀಡಬಾರದು ಎಂದು ಗೇಟ್ಸ್ ಅಮೆರಿಕಾ ಸರಕಾರವನ್ನು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ