'ಚಂದ್ರಯಾನ' ನೌಕೆಯ ದೋಷ ಸರಿಪಡಿಸಿದ ಇಸ್ರೋ

ಶುಕ್ರವಾರ, 17 ಜುಲೈ 2009 (15:47 IST)
ಭಾರತದ ಮೊತ್ತ ಮೊದಲ ಚಂದ್ರಯಾನ ನೌಕೆ 'ಚಂದ್ರಯಾನಂ-I' ತನ್ನ ಪ್ರಮುಖ ಸೆನ್ಸಾರ್ ಕಳೆದುಕೊಂಡಿದ್ದು, ಅಕಾಲಿಕ ಅಂತ್ಯ ಕಾಣುವ ಭೀತಿ ಹುಟ್ಟಿಸಿರುವಂತೆಯೇ, ವಿಜ್ಞಾನಿಗಳು ಅದನ್ನು ಸಂರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಎರಡು ವರ್ಷಗಳ ಜೀವಿತಾವಧಿ ಹೊಂದಿದ್ದ ನೌಕೆಯನ್ನು ಭಾರತ ಕಳೆದ ವರ್ಷದ ಅಕ್ಟೋಬರ್ 22ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬಾಹ್ಯಾಕಾಶದತ್ತ ಉಡ್ಡಯನಗೊಳಿಸಿತ್ತು.
PTI

"ದುರದೃಷ್ಟಕರವಾಗಿ ನಾವು ಕಳೆದ ತಿಂಗಳು ನೌಕೆಯ ಪ್ರಮುಖ ಸೆನ್ಸಾರ್ ಕಳೆದುಕೊಂಡಿದ್ದೇವೆ" ಎಂದು ಇಸ್ರೋ ಮುಖ್ಯಸ್ಥ ಜಿ. ಮಾಧವನ್ ನಾಯರ್ ತಿಳಿಸಿದ್ದಾರೆ. ಇತರ ಎರಡು ಪರಿಕರಗಳನ್ನು ಜೋಡಿಸುವ ಮೂಲಕ ಉದ್ದೇಶಿತ ದಿಕ್ಕಿಗೆ ನೌಕೆಯನ್ನು ಚಲಾಯಿಸಲು ಬಾಹ್ಯಾಕಾಶ ವಿಜ್ಞಾನಿಗಳು ಯತ್ನಿಸಿದ್ದಾರೆ ಎಂದೂ ಅವರು ವಿವರಿಸಿದ್ದಾರೆ.

ಸ್ಟಾರ್ ಸೆನ್ಸಾರ್‌ನಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅನ್ಯ ತಂತ್ರಜ್ಞಾನ ಬಳಸಿ ಉಪಗ್ರಹವು "ಚಂದ್ರನತ್ತ ದೃಷ್ಟಿ" ಇರಿಸುವುದನ್ನು ನೋಡಿಕೊಳ್ಳುವಂತೆ ವಿಜ್ಞಾನಿಗಳು ಸಫಲರಾಗಿದ್ದಾರೆ. ಕಕ್ಷೆಯನ್ನು 200 ಕಿ.ಮೀ.ಗಳಷ್ಟು ಏರಿಸಲಾಗಿದ್ದು, ತತ್ಪರಿಣಾಮವಾಗಿ, ಕಾರ್ಯಾಚರಣೆಯು ಸುರಕ್ಷಿತವಾಗಿದೆ ಮತ್ತು ಎಲ್ಲ ಸಿಸ್ಟಮ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ಇಸ್ರೋ ವಕ್ತಾರ ಎಸ್. ಸತೀಶ್ ಹೇಳಿದರು.

"ಅದನ್ನು ಉಳಿಸಿಕೊಳ್ಳಲು ನಮಗೆ ಎಷ್ಟು ಸಮಯದವರೆಗೆ ಸಾಧ್ಯವಾಗಬಹುದು ಎಂಬ ಬಗ್ಗೆ ನಮ್ಮಲ್ಲಿ ಖಚಿತತೆಯಿಲ್ಲ. ಇನ್ನಷ್ಟು ಸಮಸ್ಯೆಗಳು ಕಾಣಿಸಿಕೊಂಡಲ್ಲಿ, ಚಂದ್ರಯಾನ-Iರ ಎರಡು ವರ್ಷಗಳ ಜೀವಿತಾವಧಿಯು ಬಹುಶಃ ಕಡಿಮೆಯಾಗಬಹುದು" ಎಂದು ಸತೀಶ್ ತಿಳಿಸಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ಆರಂಭಿಸಿದ ಯಾನದಲ್ಲಿ ಬಹುತೇಕ ನಾವು ಬಯಸಿದ್ದ ಪ್ರಮುಖ ಅಂಶಗಳನ್ನು ಪಡೆದುಕೊಂಡಿದ್ದೇವೆ. ಉದ್ದೇಶಿತಮಾಹಿತಿಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ನಾಯರ್ ಹೇಳಿದ್ದಾರೆ.