ಚಿನ್ನದ ದರ : ಪ್ರತಿ 10ಗ್ರಾಂಗೆ 21,150 ರೂಪಾಯಿಗಳಿಗೆ ಏರಿಕೆ

ಮಂಗಳವಾರ, 5 ಏಪ್ರಿಲ್ 2011 (17:31 IST)
PTI
ಜಾಗತಿಕ ಮಾರುಕಟ್ಟೆಗಳ ಚೇತರಿಕೆ ಹಾಗೂ ನವರಾತ್ರಿಯ ಅಂಗವಾಗಿ, ಹೂಡಿಕೆದಾರರು ಮತ್ತು ಚಿನ್ನದ ಸಂಗ್ರಹಕಾರರಿಂದ ಬೆಳ್ಳಿ, ಚಿನ್ನ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ದರ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಪ್ರತಿ ಕೆಜಿಗೆ 500 ರೂಪಾಯಿಗಳ ಏರಿಕೆಯಾಗಿ 57,500 ರೂಪಾಯಿಗಳಿಗೆ ಏರಿಕೆಯಾಗಿದೆ. ಚಿನ್ನದ ದರದಲ್ಲಿ ಕೂಡಾ ಪ್ರತಿ 10 ಗ್ರಾಂಗೆ 30 ರೂಪಾಯಿ ಹೆಚ್ಚಳವಾಗಿ 21,150 ರೂಪಾಯಿಗಳಿಗೆ ತಲುಪಿದೆ.

ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ ಹೂಡಿಕೆದಾರರು, ಪರ್ಯಾಯ ಸುರಕ್ಷಿತ ಠೇವಣಿಯಾದ ಚಿನ್ನ ಮತ್ತು ಬೆಳ್ಳಿ ಖರೀದಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ತೈಲ ಉತ್ಪಾದಕ ರಾಷ್ಟ್ರಗಳ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಗಳ ವಹಿವಾಟಿನಲ್ಲಿ ಕಾರ್ಮೋಡದ ಛಾಯೆ ಆವರಿಸಿದ್ದರಿಂದ, ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಖರೀದಿಯಲ್ಲಿ ತೊಡಗಿದ್ದರಿಂದ ಬೆಳ್ಳಿಯ ದರ, 31 ವರ್ಷಗಳ ಗರಿಷ್ಠ ಏರಿಕೆ ಕಂಡಿದೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬೆಳ್ಳಿಯ ದರ ಪ್ರತಿ ಔನ್ಸ್‌ಗೆ ಶೇ.0.6ರಷ್ಟು ಏರಿಕೆ ಕಂಡು 38.78 ಡಾಲರ್‌ಗಳಿಗೆ ತಲುಪಿದೆ. ಚಿನ್ನದ ದರದಲ್ಲಿ ಕೂಡಾ ಪ್ರತಿ ಔನ್ಸ್‌ಗೆ ಶೇ.0.4ರಷ್ಟು ಹೆಚ್ಚಳವಾಗಿದ್ದು 1,439.10 ಡಾಲರ್‌ಗಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ