ಜಪಾನ್‌ನಲ್ಲಿರೋ ಟೆಕ್ಕಿಗಳಿಗೆ ವಾಪಸ್ ಬುಲಾವ್

ಮಂಗಳವಾರ, 15 ಮಾರ್ಚ್ 2011 (19:36 IST)
ಜಪಾನ್‌ನಲ್ಲಿ ಭೂಕಂಪದಿಂದಾಗಿ ಪರಮಾಣು ವಿಕಿರಣ ಹೊರಸೂಸುವಿಕೆಯ ಭೀತಿ ದಟ್ಟವಾಗತೊಡಗಿದಂತೆಯೇ, ಜಾಗತಿಕ ಸಾಫ್ಟ್‌ವೇರ್ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಟೆಕ್ನಾಲಜೀಸ್ ಮುಂತಾದವು ತಮ್ಮ ಭಾರತೀಯ ಉದ್ಯೋಗಿಗಳು ಮತ್ತವರ ಕುಟುಂಬಿಕರನ್ನು ವಾಪಸ್ ಕರೆಸಿಕೊಳ್ಳತೊಡಗಿವೆ.

ಇನ್ಫೋಸಿಸ್‌ನ ಜಪಾನ್ ಶಾಖೆಯಲ್ಲಿ ಸುಮಾರು 350ರಷ್ಟು ಭಾರತೀಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರೆ, ವಿಪ್ರೋದಲ್ಲಿ 400ರಷ್ಟು ಹಾಗೂ ಟಿಸಿಎಸ್‌ನಲ್ಲಿ ಸುಮಾರು 200ರಷ್ಟು ಮಂದಿ ಭಾರತೀಯರಿದ್ದಾರೆ. ಆದರೆ, ವಿಪ್ರೋ ನೌಕರರನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಇದುವರೆಗೆ ಯಾವುದೇ ಸೂಚನೆಗಳು ಲಭ್ಯವಾಗಿಲ್ಲ.

ತಕ್ಷಣವೇ ಕುಟುಂಬಿಕರೊಂದಿಗೆ ಭಾರತಕ್ಕೆ ಬರುವಂತೆ ಕಂಪನಿಯು ತನ್ನ ನೌಕರರಿಗೆ ಸೂಚಿಸಿದೆ ಎಂದು ಇನ್ಫೋಸಿಸ್ ಸಿಇಒ ಎಸ್.ಗೋಪಾಲಕೃಷ್ಣನ್ ಸುದ್ದಿಗಾರರಿಗೆ ಹೇಳಿದ್ದಾರೆ.

ಟೋಕಿಯೋದಲ್ಲಿರುವ ಡೆವಲಪ್‌ಮೆಂಟ್ ಸೆಂಟರಿನಲ್ಲಿ ನಮ್ಮ 350ರಷ್ಟು ಸಾಫ್ಟ್‌ವೇರ್ ಉದ್ಯೋಗಿಗಳಿದ್ದಾರೆ. ತಕ್ಷಣವೇ ಅವರ ಕುಟುಂಬಿಕರನ್ನು ವಾಪಸ್ ಕಳುಹಿಸುವಂತೆ ಅಥವಾ ಪರಿಸ್ಥಿತಿಯನ್ನು ನೋಡಿಕೊಂಡು ಅಲ್ಲಿ ಉಳಿಯುವಂತೆ ನಾವು ಅವಕಾಶಗಳನ್ನು ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಫುಕುಶಿಮಾದ ಡಾಯ್ಚಿ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ವಿಕಿರಣ ಸೋರಿಕೆ ಭೀತಿಯುಂಟಾಗಿರುವ ಹಿನ್ನೆಲೆಯಲ್ಲಿ ಜಪಾನ್‌ನ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದೆ.

ವೆಬ್ದುನಿಯಾವನ್ನು ಓದಿ