ಟಾಟಾ 'ಶುಭ ಗೃಹ'ಕ್ಕಾಗಿ 1,300 ಅದೃಷ್ಟಶಾಲಿಗಳ ಆಯ್ಕೆ

ಮಂಗಳವಾರ, 30 ಜೂನ್ 2009 (12:34 IST)
ಅಗ್ಗದ ಮನೆ ನಿರ್ಮಿಸಿ ಕೊಡುವ ಯೋಜನೆ 'ಶುಭ ಗೃಹ'ಕ್ಕಾಗಿ ಮೊದಲ ಹಂತದ 1,300 ಅದೃಷ್ಟಶಾಲಿಗಳನ್ನು ಟಾಟಾ ಆಯ್ಕೆ ಮಾಡಿದೆ.

ಜಗತ್ತಿನಾದ್ಯಂತದಿಂದ ಸುಮಾರು 7,000 ಅರ್ಜಿಗಳನ್ನು ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪನಿ ಸ್ವೀಕರಿಸಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೊದಲ ಹಂತದಲ್ಲಿ ಕಂಪನಿಯು ಮುಂಬೈಯ ಬೋಯಿಸಾರ್ ಸಮೀಪ ಫ್ಲ್ಯಾಟ್ ನಿರ್ಮಿಸಿ ವಿತರಿಸಲಿದೆ.

ಒಂದು ಕೋಣೆ ಹಾಗೂ ಅಡುಗೆ ಮನೆಯನ್ನೊಳಗೊಂಡ ಫ್ಲಾಟ್‌ಗೆ ನಾಲ್ಕು ಲಕ್ಷ ರೂಪಾಯಿಗಳೆಂದು ಟಾಟಾ ಮೇ ತಿಂಗಳಲ್ಲಿ ಘೋಷಿಸಿತ್ತು. ಈ ಸಂಬಂಧ ಅರ್ಜಿಗಳನ್ನು ನಂತರ ಸ್ವೀಕರಿಸಲಾಗಿತ್ತು. ಆಯ್ಕೆಯಾದ 24 ತಿಂಗಳುಗಳೊಳಗೆ ಮನೆ ಹಸ್ತಾಂತರಿಸುವ ಭರವಸೆಯನ್ನೂ ಟಾಟಾ ನೀಡಿದೆ.

ಇದೀಗ ಬಂದಿರುವ ಅರ್ಜಿಗಳಿಂದ ಕಂಪ್ಯೂಟರೀಕೃತ ಲಾಟರಿ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ. ಸುಧಾರಿತ ತಂತ್ರಾಶವನ್ನು ಹೆಸರುಗಳ ಆಯ್ಕೆಗೆ ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಒಂದು ಲಕ್ಷ ರೂಪಾಯಿಗಳ ನ್ಯಾನೋ ಕಾರಿನಿಂದ ಜಗತ್ತಿನ ಗಮನ ಸೆಳೆದಿದ್ದ ಟಾಟಾ ಕೆಲವೇ ತಿಂಗಳುಗಳ ನಂತರ ತನ್ನ ಅಗ್ಗದ ಫ್ಲ್ಯಾಟ್‌ಗಳ ಕುರಿತು ಪ್ರಕಟಣೆ ಹೊರಡಿಸಿ ರಿಯಲ್ ಎಸ್ಟೇಟ್ ವ್ಯವಹಾರಸ್ಥರ ನಿದ್ದೆಗೆಡಿಸಿತ್ತು.

ಟಾಟಾ ನಿರ್ಮಿಸುವ ಫ್ಲ್ಯಾಟ್‌ಗಳಲ್ಲಿ ಒಟ್ಟು ಎರಡು ಮಾದರಿಯ ಮನೆಗಳು ಲಭ್ಯವಿರುತ್ತದೆ. ಮೊದಲ ಮಾದರಿಯ ಮನೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳು. ಎರಡನೇ ಮಾದರಿಯ ಮನೆಗೆ 6.7 ಲಕ್ಷ ರೂಪಾಯಿಗಳು. ಇದರಲ್ಲಿ ಒಂದು ಹಾಲ್, ಅಡುಗೆ ಕೋಣೆ ಹಾಗೂ ಒಂದು ಬೆಡ್ ರೂಂ ಇರಲಿದೆ. ಜತೆಗೆ ದೊಡ್ಡ ಮನೆಗಳೂ ಟಾಟಾದ ಪಟ್ಟಿಯಲ್ಲಿ ಇರಲಿವೆ. 10ರಿಂದ 15 ಲಕ್ಷ ರೂಪಾಯಿಗಳಷ್ಟು ದುಬಾರಿಯೆನಿಸಬಹುದಾದ ಮನೆಗಳಿವೆ ಎಂದು ಟಾಟಾ ಪ್ರಕಟಿಸಿತ್ತು.

ವೆಬ್ದುನಿಯಾವನ್ನು ಓದಿ