ತರಕಾರಿ ದರ ಏರಿಕೆ: ಹಣದುಬ್ಬರ ದರ ಹೆಚ್ಚಳ

ಮಂಗಳವಾರ, 15 ಅಕ್ಟೋಬರ್ 2013 (13:23 IST)
PTI
ಈರುಳ್ಳಿ ಸೇರಿದಂತೆ ಪ್ರಮುಖ ತರಕಾರಿಗಳ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಸೆಪ್ಟೆಂಬರ್‌ನಲ್ಲಿ 7 ತಿಂಗಳ ಗರಿಷ್ಠ ಮಟ್ಟವಾದ ಶೇ 6.46ಕ್ಕೆ ಏರಿಕೆ ಕಂಡಿದೆ.

ಈರುಳ್ಳಿ ಬೆಲೆ ಏರಿಕೆಯಿಂದ ಕಳೆದ 4 ತಿಂಗಳಿಂದ ಹಣದುಬ್ಬರ ಸತತ ಏರಿಕೆ ಕಾಣುತ್ತಿದೆ. ಈರುಳ್ಳಿ ಸೆಪ್ಟೆಂಬರ್‌ನಲ್ಲಿಶೇ 323ರಷ್ಟು ತುಟ್ಟಿಯಾಗಿದೆ.

ಜುಲೈನಲ್ಲಿ ಶೇ 5.85ರಷ್ಟು ಮತ್ತು ಆಗಸ್ಟ್‌ನಲ್ಲಿ ಶೇ 6.1ರಷ್ಟು‘ಡಬ್ಲ್ಯುಪಿಐ’ ದಾಖಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇದು ಶೇ 8.07ರಷ್ಟಿತ್ತು.

ಒಟ್ಟಾರೆ ತರಕಾರಿಗಳ ಬೆಲೆ ಸೆಪ್ಟೆಂಬರ್‌ನಲ್ಲಿ ಶೇ 89ರಷ್ಟು ಹೆಚ್ಚಿದೆ. ಹಣ್ಣುಗಳ ಬೆಲೆ ಶೇ 15ರಷ್ಟು ತುಟ್ಟಿಯಾಗಿದೆ. ಇದರಿಂದ ಒಟ್ಟಾರೆ ಆಹಾರ ಹಣದುಬ್ಬರ ದರ ಶೇ 18.40ಕ್ಕೆ ಜಿಗಿದಿದೆ. ಆಗಸ್ಟ್‌ನಲ್ಲಿ ಇದು ಶೇ 18.18ರಷ್ಟಿತ್ತು. ‘ಎಲ್‌ಪಿಜಿ’ ಮತ್ತು ಪೆಟ್ರೋಲ್‌ ಹಣದುಬ್ಬರ ಕ್ರಮವಾಗಿ ಶೇ 9 ಮತ್ತು ಶೇ 9.64ಕ್ಕೆ ಏರಿಕೆ ಕಂಡಿದೆ. ಮೊಟ್ಟೆ, ಮಾಂಸ, ಮೀನು, ಪಾನೀಯಗಳು, ತಂಬಾಕು, ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳ ಧಾರಣೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

‘ಹಣದುಬ್ಬರ ಸದ್ಯ ಹಿತಕರ ಮಟ್ಟಕ್ಕಿಂತ (ಶೇ 6ಕ್ಕಿಂತ) ಹೆಚ್ಚಿದೆ. ಆದರೆ, ಈಗಾಗಲೇ ಈರುಳ್ಳಿ ಬೆಲೆ ಇಳಿಯುವ ಸೂಚನೆಗಳು ಕಂಡು­ಬಂದಿದ್ದು, ಮುಂಬರುವ ತಿಂಗಳಲ್ಲಿ ‘ಡಬ್ಲ್ಯುಪಿಐ’ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ