ಪಾಕ್‌ಗೆ ಟೊಮೆಟೋ ರಫ್ತು; ಶೀಘ್ರವೇ ಬೆಲೆ ಹೆಚ್ಚಲಿದೆ

ಭಾನುವಾರ, 30 ಅಕ್ಟೋಬರ್ 2011 (15:23 IST)
ಅಧಿಕ ಲಾಭ ಗಳಿಸುವ ದೃಷ್ಟಿಯಿಂದ ಭಾರತೀಯ ಟೊಮೆಟೋ ವ್ಯಾಪಾರಿಗಳೆಲ್ಲರೂ ಪಾಕಿಸ್ತಾನ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವುದರಿಂದ ದೇಶೀ ಸರಬರಾಜಿಗೆ ಧಕ್ಕೆಯಾಗಿದ್ದು ಮತ್ತೊಮ್ಮೆ ಟೊಮೆಟೋ ಬೆಲೆ ಏರುವ ಎಲ್ಲಾ ಸಾಧ್ಯತೆಗಳಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದೆಹಲಿ ಮತ್ತು ನಾಸಿಕ್‌ನಿಂದ ಪ್ರತೀ ದಿನ 80 ರಿಂದ 90 ಟ್ರಕ್ಕುಗಳು ಲೋಡುಗಟ್ಟಲೆ ಟೊಮೆಟೋ ತುಂಬಿಕೊಂಡು ಅಮೃತಸರದ ಅಟ್ಟಾರಿ-ವಾಘಾ ಗಡಿ ಪ್ರದೇಶದ ಮೂಲಕ ಪಾಕಿಸ್ತಾನ ಪ್ರವೇಶಿಸುತ್ತಿದ್ದು, ಪ್ರತೀ ಟ್ರಕ್‌ಗಳಲ್ಲೂ ಸುಮಾರು 16 ಟನ್‌ಗಿಂತಲೂ ಅಧಿಕ ಟೊಮೆಟೋ ಸಾಗಿಸಲಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವಾರಗಳಿಂದ ರಫ್ತು ಚುರುಕುಗೊಂಡಿದ್ದು ಒಂದು ತಿಂಗಳವರೆಗೂ ಮುಂದುವರೆಯಲಿದೆ. ಪಾಕಿಸ್ತಾನಕ್ಕೆ ಟೊಮೆಟೋ ರಫ್ತಾಗುತ್ತಿರುವುದರಿಂದ ದೆಹಲಿ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ. ಟೊಮೆಟೋ ಬೆಲೆಯು ರೂ. 20 ರಿಂದ 25 ಕ್ಕೇರಿರುವುದಾಗಿ ದೆಹಲಿ ಕೃಷಿ ಮಾರುಕಟ್ಟೆ ಮಂಡಳಿಯ ಅಧ್ಯಕ್ಷ ರಾಜೇಂದ್ರ ಶರ್ಮಾ ಅವರು ತಿಳಿಸಿದ್ದಾರೆ.

ಅಧಿಕ ಟೊಮೆಟೋ ಬೆಳೆಯುವ ಪ್ರದೇಶವಾದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಭೀಕರ ಪ್ರವಾಹ ಅಪ್ಪಳಿಸಿದ್ದರಿಂದ ಬಹುತೇಕ ಕೃಷಿ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪಾಕ್ ಪ್ರಾಂತ್ಯಗಳಲ್ಲಿ ಟೊಮೆಟೋ ಬೇಡಿಕೆ ಹೆಚ್ಚಾಗಿದ್ದು, ದೆಹಲಿ ಸಗಟು ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ 8 ರಿಂದ 15 ರೂಪಾಯಿಗೆ ಸಿಗುವ ಟೊಮೆಟೋ ಪಾಕ್ ಮಾರುಕಟ್ಟೆಯಲ್ಲಿ 25 ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದೆ.

ಸೆಪ್ಟೆಂಬರ್‌ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ದೇಶದ ಉಳಿದ ಪ್ರದೇಶಗಳಲ್ಲಿ ಟೊಮೆಟೋ ಬೆಳೆಯಲು ಸೂಕ್ತ ಹವಾಗುಣದ ಕೊರತೆಯಿದ್ದು, ಈ ಅವಧಿಯಲ್ಲಿ ಮಹಾರಾಷ್ಟ್ರದ ನಾಸಿಕ್, ಪುಣೆ ಮತ್ತು ಅಹಮದ್ ನಗರ್ ಜಿಲ್ಲೆಗಳಲ್ಲಿ ಉತ್ತಮ ವಾತಾವರಣವಿರುವುದರಿಂದ ಅತೀ ಹೆಚ್ಚು ಟೊಮೆಟೋ ಬೆಳೆಯಲಾಗುತ್ತಿದ್ದು, ಉತ್ತರ ಭಾರತದಾದ್ಯಂತ ಮಾರುಕಟ್ಟೆಗೆ ಇಲ್ಲಿಂದಲೇ ಪೂರೈಕೆಯಾಗುತ್ತಿದೆ.

ಈ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಅತ್ಯಧಿಕ ಟೊಮೆಟೋ ರಫ್ತಾದರೆ ದೇಶೀಯ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗಿ, ಬೇಡಿಕೆಯೂ ಹೆಚ್ಚುವ ಕಾರಣ ಶೀಘ್ರವೇ ಬೆಲೆ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ