ಪಾಕ್: ಭಾರತ, ಚೀನಾಗೆ ಅನಿಲ ಸರಬರಾಜು

ಸೋಮವಾರ, 12 ನವೆಂಬರ್ 2007 (17:04 IST)
ಇರಾನ್ ಮೂಲಕ ಪಾಕಿಸ್ತಾನಕ್ಕೆ ಪೂರೈಕೆಯಾಗುವ ಅನಿಲವನ್ನು ಭಾರತ ಮತ್ತು ಚೀನಾ ದೇಶಗಳಿಗೆ ಸಾಗಿಸಲು ಸಿದ್ದವಾಗಿರುವುದಾಗಿ ಪ್ರಧಾನಿ ಶೌಕತ್ ಅಜೀಜ್ ಅವರ ಸಲಹೆಗಾರ ಮೊಖ್ತಾರ್ ಅಹಮದ್ ತಿಳಿಸಿದ್ದಾರೆ.

ಮೂರನೇಯ ಪಾಲುದಾರ ದೇಶವಾದ ಭಾರತದ ಗೈರು ಹಾಜರಿಯಲ್ಲಿ ಇರಾನ್‌ನೊಂದಿಗೆ ಪಾಕಿಸ್ತಾನ 7.4 ಬಿಲಿಯನ್ ಡಾಲರ್ ವೆಚ್ಚದ ಅನಿಲ ಕೊಳವೆ ಯೋಜನೆ ಮಾತುಕತೆ ಅಂತಿಮ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ಇರಾನ್ ಮತ್ತು ಪಾಕಿಸ್ತಾನ ಅನಿಲ ಕೊಳವೆ ಯೋಜನೆಯ ಸಮಸ್ಯೆಗಳ ಕುರಿತಂತೆ ಸವಿಸ್ತಾರವಾಗಿ ಪರಿಹಾರ ಕಂಡುಕೊಳ್ಳಲಾಗಿದ್ದು ಮಾತುಕತೆಗಳು ಸೌಹಾರ್ದಯುತ ವಾತಾವರಣದಲ್ಲಿ ಅಂತಚಿಮಗೊಂಡಿವೆ ಎಂದರು.

ಪ್ರಸ್ತುತ ಪಾಕಿಸ್ತಾನದ ಅಧಿಕಾರಿಗಳು ಪಾಕ್ ನೆಲೆಯಿಂದ ಭಾರತ ಮತ್ತು ಚೀನಾ ದೇಶ ಸೇರಿದಂತೆ ಯಾವುದೇ ರಾಷ್ಟ್ರಗಳಿಗೆ ಅನಿಲ ಸರಬರಾಜು ಮಾಡಲು ಸಿದ್ದವಾಗಿರುವುದಾಗಿ ಘೋಷಿಸಿದ್ದಾರೆ.

ಇರಾನ್ ಪೆಟ್ರೋಲಿಯಂ ಸಚಿವರ ಪ್ರತಿನಿಧಿ ಹೊಜ್ಜತೋಲ್ಲಾಹ್ ಘನಿಮಿಫರ್ಡ್ ಅವರು ಮಾತನಾಡಿ ಅನಿಲ ಕೊಳವೆ ಯೋಜನೆಯಲ್ಲಿ ಭಾರತವೂ ಕೂಡಾ ಮರುಸೇರ್ಪಡೆಗೊಳ್ಳಲು ಬಯಸಿದ್ದು,ಶೀಘ್ರದಲ್ಲಿ ಒಪ್ಪಂದಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪಾಕಿಸ್ತಾನ ಮತ್ತು ಭಾರತ ದೇಶಗಳು ಅನಿಲ ಸರಬರಾಜಿಗೆ ಸಕಲ ಸಿದ್ದತೆಗಳನ್ನು ರೂಪಿಸಿದ್ದು, ದರ ಕಡಿತ ಕುರಿತಂತೆ ಇರಾನ್ ವಿಚಾರ ವಿನಿಮಯಕ್ಕೆ ಸಿದ್ದವಾಗಿದೆ. 2015 ರೊಳಗೆ ಅನಿಲ ಸರಬರಾಜು ಆರಂಭವಾಗಲಿದೆ ಎಂದು ನುಡಿದರು.

ವೆಬ್ದುನಿಯಾವನ್ನು ಓದಿ