ಬುಲೆಟ್ ಟ್ರೇನ್: ಭಾರತಕ್ಕೆ ತಾಂತ್ರಿಕ ಸಹಕಾರ ನೀಡಲು ಚೀನಾ ಸಮ್ಮತಿ

ಶನಿವಾರ, 22 ಮಾರ್ಚ್ 2014 (13:49 IST)
PTI
ಅತಿ ವೇಗದ ರೈಲು, ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ಭಾರತಕ್ಕೆ ಚೀನಾ ತಾಂತ್ರಿಕ ಸಹಕಾರ ನೀಡಲಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ವಿಸ್ತರಣೆ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಲಿದೆ’ ಎಂದು ಚೀನಾ ಪ್ರಧಾನಿ ಲೀ ಕೆಕೆಯಾಂಗ್‌ ಇಲ್ಲಿ ಹೇಳಿದರು.

ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯಾ ನೇತೃತ್ವದ ನಿಯೋಗದ ಜತೆ ಮಾತುಕತೆ ನಡೆಸಿದ ಅವರು, ಭಾರತದಲ್ಲಿ ಹೂಡಿಕೆ ಮಾಡಲು ಚೀನಾ ಆಸಕ್ತಿ ಹೊಂದಿದೆ. ಚೀನಾದ ತಾಂತ್ರಿಕ ನೆರವಿನೊಂದಿಗೆ ಭಾರತೀಯ ರೈಲ್ವೆ ಜಾಲವನ್ನು ಆಧುನೀಕರಣಗೊಳಿಸಬಹುದು ಎಂದರು.

ಅಹ್ಲುವಾಲಿಯಾ ನೇತೃತ್ವದ ಭಾರತೀಯ ನಿಯೋಗ ಈಗಾಗಲೇ ಚೀನಾದ ಉನ್ನತ ಮಟ್ಟದ ಅಧಿಕಾರಿಗಳ ಜತೆ ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಹಲವು ವಲಯಗಳಲ್ಲಿ ಹೂಡಿಕೆಗೆ ಆಹ್ವಾನವನ್ನೂ ನೀಡಿದೆ.

ಅತಿ ವೇಗದ ರೈಲು ಯೋಜನೆಗೆ ಪ್ರತಿ ಕಿ.ಮೀಗೆ ಅಂದಾಜು 120 ಕೋಟಿ ವೆಚ್ಚವಾಗುತ್ತದೆ. ಇದರ ಬದಲಿಗೆ, ಕೆಲವೆಡೆ ಈಗಿರುವ ರೈಲ್ವೆ ಹಳಿಗಳನ್ನೇ ಅಧುನೀಕರಣಗೊಳಿಸಿ, ರೈಲಿನ ವೇಗವನ್ನು ಗಂಟೆಗೆ 180 ಕಿ.ಮೀಗೆ ಹೆಚ್ಚಿಸುವ ಸಾಧ್ಯತೆ ಕುರಿತೂ ಚೀನಾದ ತಜ್ಞರ ಜತೆ ಭಾರತೀಯ ರೈಲ್ವೆ ಮಂಡಳಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

ದೆಹಲಿ-ಆಗ್ರಾ, ದೆಹಲಿ-ಕಾನ್ಪುರ್ , ದೆಹಲಿ-ಚಂಡೀಗಡ್ ನಡುವೆ ಅತಿ ವೇಗದ ರೈಲ್ವೆ ಹಳಿ ನಿರ್ಮಿಸುವ ಪ್ರಸ್ತಾವವನ್ನು ಭಾರತ ಚೀನಾದ ಮುಂದಿಟ್ಟಿದೆ.

ವೆಬ್ದುನಿಯಾವನ್ನು ಓದಿ