ಮೊಬೈಲ್, ಟ್ಯಾಬ್ಲೆಟ್‌ಗಳು ಶೇ 7ರಿಂದ 8ರಷ್ಟು ಅಗ್ಗ

ಬುಧವಾರ, 13 ಫೆಬ್ರವರಿ 2013 (12:41 IST)
PTI
ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಕೇಂದ್ರ ಮಾರಾಟ ತೆರಿಗೆ ಕಾಯ್ದೆಯಡಿ ವಿಶೇಷ ಪ್ರಮುಖ ಸರಕುಗಳು ಎಂದು ಪರಿಗಣಿಸಬೇಕು ಎಂದು `ರಾಜ್ಯಗಳ ಹಣಕಾಸು ಸಚಿವರ ಸಮಿತಿ'ಗೆ ಕೇಂದ್ರ ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಪತ್ರ ಬರೆದಿದ್ದಾರೆ. ಒಂದೊಮ್ಮೆ ಈ ಅಂಶವನ್ನು ರಾಜ್ಯಗಳು ಪರಿಗಣಿಸಿದರೆ ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳು ಶೇ 7ರಿಂದ 8ರಷ್ಟು ಅಗ್ಗವಾಗಲಿವೆ.

ಬಿಹಾರದ ಹಣಕಾಸು ಸಚಿವ ಸುಶೀಲ್ ಕುಮಾರ್ ಮೋದಿ ನೇತೃತ್ವದ ರಾಜ್ಯಗಳ ಹಣಕಾಸು ಸಚಿವರ ಸಮಿತಿಗೆ ಸಿಬಲ್ ಬರೆದಿರುವ ಪತ್ರದಲ್ಲಿ, `ಮೊಬೈಲ್ ಹ್ಯಾಂಡ್‌ಸೆಟ್ ಮತ್ತು ಟ್ಯಾಬ್ಲೆಟ್‌ಗಳು ದೇಶದ ಒಟ್ಟಾರೆ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವಂತಹ ವಸ್ತುಗಳಾಗಿವೆ. ಇವೆರಡನ್ನೂ ವಿಶೇಷ ಪ್ರಮುಖ ಸರಕುಗಳ ಪಟ್ಟಿಗೆ ಸೇರಿಸಬೇಕಿದೆ' ಎಂದು ಗಮನ ಸೆಳೆಯಲಾಗಿದೆ.

ಬಹಳಷ್ಟು ರಾಜ್ಯಗಳು ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ಗಳ ಮೇಲೆ ಶೇ 12.5ರಷ್ಟು ಮಾರಾಟ ತೆರಿಗೆ ವಿಧಿಸುತ್ತಿವೆ. 1956ರ ಕೇಂದ್ರ ಮಾರಾಟ ತೆರಿಗೆ ಕಾಯ್ದೆಯ `ವಿಶೇಷ ಪ್ರಮುಖ ಸರಕುಗಳು' ನಿಯಮದಡಿ ಬರುವ ವಸ್ತುಗಳಿಗೆ ರಾಜ್ಯಗಳು ಗರಿಷ್ಠ ಶೇ 5ರಷ್ಟು ಮಾರಾಟ ತೆರಿಗೆ ವಿಧಿಸಬಹುದು.

ಇಂಟರ್ನೆಟ್ ಸೇವೆ ಬಳಸಿಕೊಳ್ಳುವ ಮೊಬೈಲ್ ಫೋನ್ ಮತ್ತಿತರ ಎಲೆಕ್ಟ್ರಾನಿಕ್ ಪರಿಕರಗಳನ್ನು 2012ರ `ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ'ಯಡಿ ಅನುಮತಿಸಿರುವಂತೆ `ಇಂಟರ್ನೆಟ್ ಬಳಕೆ ವಸ್ತುಗಳ' ವಿಭಾಗದಲ್ಲಿಯೇ ಬರುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸಚಿವ ಸಿಬಲ್ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

`ಕಪಿಲ್ ಸಿಬಲ್ ಅವರ ಮನವಿಯನ್ನು ರಾಜ್ಯಗಳ ಹಣಕಾಸು ಸಚಿವರ ಸಮಿತಿ ಪರಿಗಣಿಸಿದರೆ ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳ ತೆರಿಗೆ ಹೊರೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಕನಿಷ್ಠ ಶೇ 7ರಿಂದ 8ರಷ್ಟು ಅಗ್ಗವಾಗಲಿವೆ' ಎಂದು ಇಂಡಿಯನ್ ಸೆಲ್ಯುಲರ್ ಅಸೋಸಿಯೇಷನ್ ಅಧ್ಯಕ್ಷ ಪಂಕಜ್ ಮೊಹಿದ್ರೊ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ