ವಿಪ್ರೋ ನೂತನ ಸಿಇಒ ವೇತನ ಕೇವಲ 10 ಕೋಟಿ ರೂ.

ಗುರುವಾರ, 31 ಮಾರ್ಚ್ 2011 (19:25 IST)
PTI
ವಿಪ್ರೋ ಕಂಪೆನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡ ಟಿಕೆ ಕುರಿಯನ್, ವಾರ್ಷಿಕ 10 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಸಂಸ್ಥೆಗೆ ನೂತನವಾಗಿ ನೇಮಕಗೊಂಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುರಿಯನ್, ವಾರ್ಷಿಕವಾಗಿ ಕನಿಷ್ಠ 3 ಕೋಟಿ ರೂಪಾಯಿಗಳಿಂದ ಗರಿಷ್ಠ 10 ಕೋಟಿ ರೂಪಾಯಿಗಳವರೆಗೆ ವೇತನ ಪಡೆಯಲಿದ್ದಾರೆ ಎಂದು ಕಂಪೆನಿ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.

ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳಲ್ಲಿ, ಟಿಕೆ. ಕುರಿಯನ್ ಗರಿಷ್ಠ ವೇತನ ಪಡೆಯುವ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ.

ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೆಶಕ ಎಸ್.ರಾಮಾದೊರೈ ವಾರ್ಷಿಕವಾಗಿ ಒಟ್ಟು 3.61 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.

ಇನ್ಫೋಸಿಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಗೋಪಾಲಕೃಷ್ಣನ್ ಅವರಿಗೆ ವಾರ್ಷಿಕವಾಗಿ 1.01 ಕೋಟಿ ರೂಪಾಯಿಗಳ ವೇತನವನ್ನು ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಅಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಒಂದು ವೇಳೆ ಕಂಪೆನಿ, ಕುರಿಯನ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ಅಮಾನತ್ತುಗೊಳಿಸಿದಲ್ಲಿ, ಕಳೆದ ವರ್ಷ ನೀಡಿದ ವೇತನದನ್ವಯ 12 ತಿಂಗಳ ವೇತವನ್ನು ನೀಡಬೇಕಾಗುತ್ತದೆ.

ಕಳೆದ ಜನೆವರಿ ತಿಂಗಳ ಅವಧಿಯಲ್ಲಿ ಜಂಟಿ ಸಿಇಒಗಳಾದ ಗಿರೀಶ್ ಪರಂಜಪೆ ಮತ್ತು ಸುರೇಶ್ ವಾಸ್ವಾನಿಯವರನ್ನು ಹುದ್ದೆಯಿಂದ ಅಮಾನತ್ತುಗೊಳಿಸಿದ ಕಂಪೆನಿ, ಟಿಕೆ ಕುರಿಯನ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿತ್ತು.

ವೆಬ್ದುನಿಯಾವನ್ನು ಓದಿ