ವಿಶ್ವದ ಬೃಹತ್ ಯುರೇನಿಯಂ ನಿಕ್ಷೇಪ ಆಂಧ್ರದಲ್ಲಿ

ಮಂಗಳವಾರ, 19 ಜುಲೈ 2011 (16:54 IST)
ಭಾರೀ ಪ್ರಮಾಣದ ಯುರೇನಿಯಂ ನಿಕ್ಷೇಪ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದು, ಇದು ವಿಶ್ವದಲ್ಲೇ ಅತೀ ದೊಡ್ಡ ಯುರೇನಿಯಂ ನಿಕ್ಷೇಪ ಎಂದು ಅಣುಶಕ್ತಿ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಂಧ್ರಪ್ರದೇಶದ ತುಮಲಪಲ್ಲಿ ಗಣಿಯಲ್ಲಿ ಈಗಾಗಲೇ ಪತ್ತೆ ಹಚ್ಚಲಾಗಿರುವಂತೆ 49 ಸಾವಿರ ಟನ್ ಯುರೇನಿಯಂ ಅದಿರು ಇದ್ದು, ಇಲ್ಲಿ ಮೂರು ಪಟ್ಟು ಹೆಚ್ಚು ಅದಿರು ನಿಕ್ಷೇಪ ಇರುವ ಸಾಧ್ಯತೆ ಇದೆ. ಒಂದು ವೇಳೆ ಅದು ನಿಜವೇ ಆದರೆ, ವಿಶ್ವದ ಅತೀ ದೊಡ್ಡ ಯುರೇನಿಯಂ ಗಣಿಯಾಗಲಿದೆ ಎಂದು ತಿಳಿಸಿರುವ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಶ್ರೀಕುಮಾರ್ ಬ್ಯಾನರ್ಜಿ, ಇನ್ನು ಆರು ತಿಂಗಳಲ್ಲೇ ಕಾರ್ಯಾರಂಭವಾಗಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈಗಾಗಲೇ ಇಲ್ಲಿ ಲಭ್ಯವಿರುವ ಯುರೇನಿಯಂ ಪ್ರಮಾಣದಲ್ಲಿ ಮುಂದಿನ ನಲ್ವತ್ತು ವರ್ಷಗಳ ವರೆಗೆ 8,000 ಮೆಗಾವ್ಯಾಟ್ ಅಣು ವಿದ್ಯುತ್ ತಯಾರಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

ಈಗಾಗಲೇ ಉತ್ಪಾದನೆಯಾಗುತ್ತಿರುವ 4.7 ಗಿಗಾವ್ಯಾಟ್ ಅಣುವಿದ್ಯುತ್ ಪ್ರಮಾಣವನ್ನು ಮಾರ್ಚ್ 2012ರ ವೇಳೆಗೆ 7.3 ಗಿಗಾವ್ಯಾಟ್‌ಗೆ ಹೆಚ್ಚಿಸಲು ಉದ್ದೇಶಿಸಿರುವ ಸರ್ಕಾರ, 2020ರ ವೇಳೆಗೆ ಇದೇ ಪ್ರಮಾಣವನ್ನು 20 ಗಿಗಾವ್ಯಾಟ್‌ಗೆ ಹೆಚ್ಚಿಸಲು ಉದ್ದೇಶಿಸಿದೆ.

ತನ್ನ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಹೊರಟಿರುವ ಸರ್ಕಾರ, ಈಗಾಗಲೇ ಅಮೆರಿಕದೊಂದಿಗೆ ಒಪ್ಪಂದವೊಂದಕ್ಕೆ ಸಹಿಹಾಕಿದ್ದು, ಈ ನಿಟ್ಟಿನಲ್ಲಿ ಅಂದಾಜು 150 ಶತಕೋಟಿ ಡಾಲರ್ ಮೊತ್ತದ ಪರಮಾಣು ವಿದ್ಯುತ್ ಮಾರುಕಟ್ಟೆಯನ್ನು ಬೃಹತ್ ಖಾಸಗಿ ಅಣುಸ್ಥಾವರ ನಿರ್ಮಾಣ ಸಂಸ್ಥೆಗಳಾದ ಜಿಇ ಮತ್ತು ಅರೇವಾಗಳೆದುರು ತರೆದಿಟ್ಟಿದೆ.

ವೆಬ್ದುನಿಯಾವನ್ನು ಓದಿ