ಸಾಗರೋತ್ತರ ಕಂಪೆನಿಗಳ ಸ್ವಾಧೀನಕ್ಕೆ ಟಾಟಾ ತಡೆ

ಬುಧವಾರ, 12 ನವೆಂಬರ್ 2008 (17:06 IST)
ವಿದೇಶಿ ಕಂಪೆನಿಗಳನ್ನು ಖರೀದಿಸುವಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಮೂಹವು ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಗರೋತ್ತರ ಕಂಪೆನಿಗಳ ಸ್ವಾಧೀನ ಯೋಜನೆಗಳನ್ನು ತಡೆಹಿಡಿದಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ನವೆಂಬರ್ ಆರರಂದು ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ, ಕಂಪೆನಿಗಳ ವ್ಯವಸ್ಥಾಪಕರಿಗೆ ಇ-ಮೇಲ್ ಸಂದೇಶವನ್ನು ರವಾನಿಸಿ ಬಾಕಿ ಇರುವ ಸಾಲ ಮತ್ತು ಹಣಕಾಸು ಒಪ್ಪಂದಗಳನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ಆದೇಶ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸ್ವಾಧೀನಪಡಿಸಿಕೊಂಡ ಸಾಗರೋತ್ತರ ಕೆಲ ಕಂಪೆನಿಗಳು ಬಂಡವಾಳ ಮತ್ತು ಕಾರ್ಯಾಚರಣೆಗಾಗಿ ಸಾಲದ ಸುಳಿಗೆ ಸಿಲುಕಿ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಇ-ಮೇಲ್ ಸಂದೇಶದಲ್ಲಿ ರತನ್ ಟಾಟಾ ಮಾಹಿತಿಯನ್ನು ರವಾನಿಸಿದ್ದಾರೆ ಎಂದು ಹೇಳಲಾಗಿದೆ.

ಗ್ರಾಹಕ ಉತ್ಪನ್ನಗಳು, ಅಟೋಮೊಬೈಲ್ಸ್ , ಇಂಧನ, ಸ್ಟೀಲ್ ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟಾಟಾ ಸಮೂಹ ಸಂಸ್ಥೆ 2007-08ರಲ್ಲಿ 62.5 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದ್ದು, 27 ಕಂಪೆನಿಗಳು ಶೇರುಪೇಟೆಯಲ್ಲಿ 60 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಿದೆ ಎಂದು ಟಾಟಾ ಸಮೂಹದ ವೆಬ್‌ಸೈಟ್ ಪ್ರಕಟಿಸಿದೆ.

ವೆಬ್ದುನಿಯಾವನ್ನು ಓದಿ