ಸಿಂಗೂರು ಭೂ ವಿವಾದ; ಮಮತಾಗೆ ಜಯ, ಟಾಟಾಗೆ ಮುಖಭಂಗ

ಬುಧವಾರ, 28 ಸೆಪ್ಟಂಬರ್ 2011 (15:34 IST)
PTI
ಐದು ವರ್ಷಗಳ ಹಿಂದೆ ದೇಶದಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಸಿಂಗೂರು ಭೂ ವಿವಾದದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ‌ ಅವರಿಗೆ ಭಾರೀ ಜಯ ಸಂದಂತಾಗಿದೆ. ಈ ವಿವಾದದ ವಿಚಾರಣೆ ನಡೆಸುತ್ತಿದ್ದ ಕೋಲ್ಕತಾ ಹೈಕೋರ್ಟ್, ವಿವಾದದ ಕೇಂದ್ರ ಬಿಂದುವಾಗಿದ್ದ ಸಿಂಗೂರು ಭೂ ಪುನರ್ವಸತಿ ಮತ್ತು ಅಭಿವೃದ್ಧಿ ಕಾಯ್ದೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಕಾಯ್ದೆ ಸಮರ್ಪಕವಾಗಿದ್ದು ಸಂವಿಧಾನಬದ್ದವಾಗಿದೆ ಎಂದು ಬುಧವಾರ ತಿಳಿಸಿದೆ. ಅಲ್ಲದೆ, ಈ ಕಾಯ್ದೆಯು ಸಾರ್ವಜನಿಕರ ಹಿತಾಸಕ್ತಿಯನ್ನು ಹೊಂದಿದೆ ಎಂದು ಕೋರ್ಟ್ ಒತ್ತಿ ಹೇಳಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದೀಗ ಈ ಕುರಿತು ಸಂತ್ರಸ್ತರೇನಾದರೂ ಆಕ್ಷೇಪಣೆ ಸಲ್ಲಿಸಲು ಅನುಕೂಲವಾಗುವಂತೆ ಅಂತಿಮ ತೀರ್ಪು ಘೋಷಿಸುವುದನ್ನು ನವೆಂಬರ್ 2 ರ ವರೆಗೆ ತಡೆಹಿಡಿಯಲಾಗಿದೆ. ಈ ಎರಡು ತಿಂಗಳ ಅವಧಿಯೊಳಗೆ ಟಾಟಾ ಸುಪರ್ದಿಯಲ್ಲಿರುವ ಭೂಮಿಯನ್ನು ಪಶ್ಚಿಮ ಬಂಗಾಳ ಸರ್ಕಾರಕ್ಕೆ ವರ್ಗಾಯಿಸುವ ಪ್ರಕ್ರಿಯೆಯನ್ನು ಶಾಂತರೀತಿಯಲ್ಲಿ ನಿರ್ವಹಿಸಲು ಹೂಗ್ಲಿ ಜಿಲ್ಲಾ ನ್ಯಾಯಿಕ ದಂಡಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿಶೇಷಾಧಿಕಾರಿಗಳಾಗಿ ಕೋರ್ಟ್ ನೇಮಿಸಿದೆ.

ಹಿನ್ನೆಲೆ....
ದೇಶದ ಅತೀ ಕಡಿಮೆ ದರದ ನ್ಯಾನೋ ಕಾರಿನ ಆರಂಭಿಕ ಉತ್ಪಾದನಾ ಘಟಕವನ್ನು ಸಿಂಗೂರು ಭೂ ಪ್ರದೇಶದಲ್ಲಿ ನಿರ್ಮಿಸಲು ದೇಶದ ಪ್ರತಿಷ್ಠಿತ ಕಾರು ತಯಾರಕ ಟಾಟಾ ಸಂಸ್ಥೆ ನಿರ್ಧರಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ನೂತನ ಘಟಕ ಸ್ಥಾಪಿಸಲು ಹೊರಟಿರುವ ಭೂ ಪ್ರದೇಶ ಸರ್ಕಾರಿ ಒಡೆತನಕ್ಕೆ ಸೇರಿದ್ದು, ಟಾಟಾ ಅಕ್ರಮವಾಗಿ ಘಟಕ ಸ್ಥಾಪಿಸಲು ಹೊರಟಿರುವುದಾಗಿ ಆರೋಪಿಸಿ, ಡಿಸೆಂಬರ್ 2006 ರಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆನಂತರ, ಕಾನೂನು ರೀತ್ಯಾ ಇತ್ಯರ್ಥಕ್ಕಾಗಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ ನ್ಯಾನೋ ಘಟಕ ಗುಜರಾತ್‌ಗೆ ಸ್ಥಳಾಂತರಗೊಂಡಿತ್ತು.
PTI

ಟಾಟಾ ಮುಂದಿರುವ ಮಾರ್ಗೋಪಾಯ...
ವಿವಾದದ ನಷ್ಟ ಪರಿಹಾರ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದೆಂದು ಟಾಟಾಗೆ ಹೈಕೋರ್ಟ್ ಸೂಚಿಸಿದ್ದು, ಆರು ತಿಂಗಳೊಳಗೆ ಅಂತಿಮ ತೀರ್ಪು ಹೊರಬೀಳಬೇಕಾಗುತ್ತದೆ ಎಂದು ಕೋರ್ಟ್ ಸೂಚಿಸಿದೆ.

ಇದೀಗ ಹೊರಬೀಳಲಿರುವ ಅಂತಿಮ ತೀರ್ಪಿನ ವಿರುದ್ಧ, ಟಾಟಾ ಸುಪ್ರೀಂ ಕೋರ್ಟ್ ಮೊರೆ ಹೋಗಲಿರುವುದಾಗಿ ಪ್ರಮುಖ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ