‘ನಮ್ಮ ಮೆಟ್ರೋ’ದಿಂದ ರಿಯಲ್ ಎಸ್ಟೇಟ್ ಉದ್ಯಮ ಅಭಿವೃದ್ಧಿ

ಶುಕ್ರವಾರ, 14 ಮಾರ್ಚ್ 2014 (13:01 IST)
PR
೨೦೧೧ರಲ್ಲಿ ಆರಂಭವಾದ ನಮ್ಮ ಮೆಟ್ರೋ ಯೋಜನೆಯ ಪ್ರಕ್ರಿಯೆಯನ್ನು ಜನರು ನಿರಂತರವಾಗಿ ನೋಡುತ್ತಿದ್ದಾರೆ. ಮಾರ್ಚ್ ೧ರವರೆಗೆ ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗಿನ ೬.೫ ಕಿ.ಮೀ. ದೂರಕ್ಕೆ ಮಾತ್ರ ಮೆಟ್ರೋ ರೈಲು ಸಂಚರಿಸುತ್ತಿತ್ತು. ಆದರೆ ನಮ್ಮ ಮೆಟ್ರೋದ ಪ್ರಮುಖ ಹಂತ ರೀಚ್ ೩ ಮತ್ತು ೩ಎ ಉದ್ಘಾಟನೆಯಾದಾಗ ಪ್ರಮುಖ ಮೈಲುಗಲ್ಲಾಯಿತು. ಸಂಪಿಗೆ ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶದವರೆಗಿನ ಮಾರ್ಗ ೧೦ ಕಿಲೋಮೀಟರ್ ಇದ್ದು, ಯೋಜನೆ ಪೂರ್ಣಗೊಂಡಾಗ ಒಟ್ಟು ೧೦ ನಿಲ್ದಾಣಗಳು ಚಾಲನೆಗೆ ಬರಲಿವೆ. ಇದರ ನೇರ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಬೀಳಲಿದೆ.

ಮೆಟ್ರೋ ರೀಚ್ ೩ ಮತ್ತು ೩ಎ ಯ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಬೀರಿದ ಪರಿಣಾಮ ನಮಗೆ ಸಂಪೂರ್ಣ ಅರಿವಾಗಬೇಕಾದರೆ ನಾವು ರೀಚ್ ೧ ಇರುವ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮಾರ್ಗದಲ್ಲಿ ನಡೆದ ಅಭಿವೃದ್ಧಿಯನ್ನು ಗಮನಹರಿಸಬೇಕಾಗುತ್ತದೆ.

ಎಂ.ಜಿ.ರಸ್ತೆ, ಹಲಸೂರು ಹಾಗೂ ಇಂದಿರಾನಗರದ ಸಾಂದ್ರತೆಯನ್ನು ಕಡಿಮೆಗೊಳಿಸಲು ಮೂಲಭೂತ ಸೌಕರ್ಯಗಳು ಹೆಚ್ಚಿದಾಗ ಸಾಧ್ಯವಾಯಿತು. ಇದರಿಂದಾಗಿ ಈ ಮಾರ್ಗದಲ್ಲಿ ರಿಯಲ್ ಎಸ್ಟೇಟ್ ದರದಲ್ಲಿ ಏರಿಕೆ ಆರಂಭವಾಯಿತು. ಹಳೆ ಮದ್ರಾಸ್ ರಸ್ತೆಯಲ್ಲಿ ವಸತಿ ಪ್ರದೇಶಗಳ ದರ ಶೇ.೨೫ರಿಂದ ೩೦ಕ್ಕೆ ಏರಿತು. ಇದರ ಜೊತೆಗೆ ಎಫ್‌ಎಆರ್ ೩.೨ರಿಂದ ೪ಕ್ಕೇರಿತು. ಇದು ಈ ಮಾರ್ಗದಲ್ಲಿ ಅತಿ ಹೆಚ್ಚು ಆದಾಯ ಗಳಿಕೆ ಹಾಗೂ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿತು. ಮೆಟ್ರೋ ರೀಚ್ ೧ರಲ್ಲಿ ಮನೆಗಳ ಮರು ಮಾರಾಟ ಬೆಲೆ ಏರಿಕೆಯಾಯಿತು. ಇಂದಿರಾನಗರದಲ್ಲಿ ಮರು ಮಾರಾಟ ಬೆಲೆ ಚದರ ಅಡಿಗೆ ೧೨ ಸಾವಿರ ರೂ.ಗೆ ಏರಿಕೆಯಾಯಿತು ಅಂತ ಸಿ.ಎನ್ ಗೋವಿಂದರಾಜು, ಕ್ರೆಡಾಯ್ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷರು ತಿಳಿಸಿದರು.

ನಗರಪ್ರದೇಶದ ಯಾವುದೇ ಅಭಿವೃದ್ಧಿಗೆ ಸಂಪರ್ಕವೇ ಪ್ರಮುಖ ಕಾರಣ. ಮೆಟ್ರೋ ರೀಚ್ ೩ ಮತ್ತು ೩ಎಯಿಂದಾಗಿ ಈ ಮಾರ್ಗದಲ್ಲಿ ಟ್ರಾಫಿಕ್ ಕಡಿಮೆಯಾಗಲು ಕಾರಣವಾಯಿತು. ಅತಿ ಕಡಿಮೆ ದರದಲ್ಲಿ ವೇಗವಾಗಿ ಜನ ಸಾಮಾನ್ಯರು ತಲುಪಲು ಕಾರಣವಾಯಿತು. ಮೆಟ್ರೋ ನಿಲ್ದಾಣದ ಸಮೀಪ ಪ್ರದೇಶಗಳು ಇದಕ್ಕೆ ಸಾಕ್ಷಿಯಾಗುತ್ತಿದೆ.

೧೦.೩ ಕಿ.ಮೀ. ಉದ್ದದ ರೀಚ್ ೩ ಮತ್ತು ೩ಎ ಗ್ರೀನ್‌ಲೈನ್‌ನ ಭಾಗ. ಇದು ಪೀಣ್ಯದಿಂದ ಮಲ್ಲೇಶ್ವರಂ ಸಮೀಪದ ಸಂಪಿಗೆ ರಸ್ತೆಯನ್ನು ಸಂಪರ್ಕಿಸುತ್ತದೆ. ಸದ್ಯ ೧೦ರಲ್ಲಿ ೪ ನಿಲ್ದಾಣಗಳು ಮಾತ್ರ ಕಾರ್ಯನಿರ್ವಹಿಸಲು ಆರಂಭಿಸಿವೆ. ಮುಂದಿನ ೩೦ ವರ್ಷದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಈಗಿರುವ ವ್ಯವಸ್ಥೆಯೇ ಪ್ರಯಾಣಿಕರ ನಿತ್ಯ ಸಂಚಾರಕ್ಕೆ ಸಾಕಾಗುತ್ತದೆ. ಅಕ್ಟೋಬರ್ ಅಂತ್ಯದ ವೇಳೆಗೆ ಪೀಣ್ಯದಿಂದ ನಾಗಸಂದ್ರವರೆಗಿನ ೨.೫ ಕಿ.ಮೀ. ಹಾಗೂ ಸಂಪಿಗೆ ರಸ್ತೆಯಿಂದ ನ್ಯಾಷನಲ್ ಕಾಲೇಜುವರೆಗಿನ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ. ಸಂಪಿಗೆ ನಿಲ್ದಾಣದ ಮುಂದಿನ ನಿಲ್ದಾಣದಲ್ಲಿ ಗ್ರೀನ್ ಮೆಟ್ರೋ, ಪರ್ಪಲ್ ಮೆಟ್ರೋ ರಸ್ತೆಯನ್ನು ಸಂಪರ್ಕಿಸಲಿವೆ.

ಈ ಕಾಮಗಾರಿ ಪೂರ್ಣಗೊಂಡಾಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರಿ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಜನರು ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಮನೆ ಖರೀದಿಗೆ ಮುಂದಾಗುತ್ತಾರೆ. ಮೆಟ್ರೋ ಆರಂಭವಾಗುತ್ತಿದ್ದಂತೆ ಪ್ರಮುಖ ವಸತಿಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳಿಗೂ ಪ್ರಾಮುಖ್ಯತೆ ಸಿಗುತ್ತದೆ. ಇದರಿಂದ ಈ ಪ್ರದೇಶಗಳ ದರದಲ್ಲಿ ಸಾಮ್ಯತೆ ಕಾಣಿಸಿಕೊಳ್ಳಲಿದೆ.

ಹಲವಾರು ರೆಸಿಡೆನ್ಷಿಯಲ್ ಪ್ರಾಜೆಕ್ಟ್‌ಗಳು ಆರಂಭವಾಗಲಿದ್ದು, ಶಾಲೆ, ಆಸ್ಪತ್ರೆಗಳು ತಲೆ ಎತ್ತಲಿವೆ. ರಿಟೇಲ್ ಮಾಲ್‌ಗಳು ಆರಂಭವಾಗಲಿದ್ದು ಇದರಿಂದಾಗಿ ರಿಯಲ್ ಎಸ್ಟೇಟ್ ಉದ್ಯಮದ ಚಿತ್ರಣವೇ ಬದಲಾಗಲಿದೆ. ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಎಂದು ಈಗಾಗಲೇ ಸಿಬಿಡಿಯಲ್ಲಿ ಕೆಲಸ ಮಾಡುತ್ತಿರುವ ಜನರು ಮೆಟ್ರೋ ಲೈನ್ ಬಳಿಯೇ ಮನೆಗಳನ್ನು ಖರೀದಿಸುತ್ತಿದ್ದಾರೆ. ಮೆಟ್ರೋ ಜೊತೆಗೆ ರಿಯಲ್ ಎಸ್ಟೇಟ್‌ಗೂ ಮಾರುಕಟ್ಟೆಯಲ್ಲಿ ಬೇಡಿಕೆ ಆರಂಭವಾಗಿದೆ.

ರೀಚ್ ೩ ಮತ್ತು ೩ಎ ಸಂಪೂರ್ಣವಾಗಿ ಆರಂಭಗೊಳ್ಳಲು ಇನ್ನೂ ಕೆಲ ಕಾಲ ಬೇಕಾಗಿದ್ದರೂ ಈಗಾಗಲೇ ಇದರ ಪರಿಣಾಮ ರಿಯಾಲ್ಟಿ ಸೆಕ್ಟರ್‌ನಲ್ಲಿ ಕಾಣಿಸಲು ಆರಂಭವಾಗಿದೆ. ಮೂಲಭೂತ ಸೌಕರ್ಯಗಳು ಸಂಪೂರ್ಣ ಅಭಿವೃದ್ಧಿಯಾದಾಗ, ಕಾಲವೇ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮ ಹೇಗೆ ಸಾಗುತ್ತದೆ ಎಂಬ ಬಗ್ಗೆ ಚಿತ್ರಣ ನೀಡಲಿದೆ ಅಂತ ಸಿ.ಎನ್ ಗೋವಿಂದರಾಜು, ಕ್ರೆಡಾಯ್ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷರು ತಿಳಿಸಿದರು.

ಬೆಂಗಳೂರು ನಗರಕ್ಕೆ ನಮ್ಮ ಮೆಟ್ರೋ ಮೂಲಭೂತ ಸೌಕರ್ಯವನ್ನು ನೀಡುತ್ತಿದ್ದು ಇದನ್ನು ನಾವು ಧನಾತ್ಮಕ ಅಂಶವಾಗಿ ಪರಿಗಣಿಸಬೇಕಾಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮ ದೃಷ್ಟಿಯಿಂದ ಹೇಳುವುದಾದರೆ, ದೀರ್ಘಾವಧಿಯಲ್ಲಿ ದರಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ನಮ್ಮ ಮೆಟ್ರೋದ ಎಲ್ಲಾ ಹಂತಗಳ ಕಾಮಗಾರಿ ಪೂರ್ಣಗೊಂಡ ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೊಡುಗೆ ಏನು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬದಲಾವಣೆ ನಿಧಾನವಾಗಿ ಆಗುತ್ತದೆ.

ವೆಬ್ದುನಿಯಾವನ್ನು ಓದಿ