2010ರಲ್ಲಿ ಕಾರುಗಳ ಬೆಲೆ ಏರಿಕೆ: ಈಗಲೇ ಕಾರು ಖರೀದಿಸಿ!

ಬುಧವಾರ, 25 ನವೆಂಬರ್ 2009 (17:09 IST)
ನೀವೊಂದು ಕಾರು ಖರೀದಿಸುವ ಯೋಚನೆ ಮಾಡುತ್ತಿದ್ದರೆ, ಖಂಡಿತವಾಗಿಯೂ ಈಗಲೇ ಮುಂದಡಿಯಿಡಿ. ಜನವರಿಯಲ್ಲಿ ಕೊಂಡುಕೊಂಡರೆ ಸಾಕೆಂದು ನಿಮ್ಮ ಯೋಚನೆಯಿದ್ದರೂ, ಅದಕ್ಕಿಂತಲೂ ಮುಂಚಿತವಾಗಿ ಈ ವರ್ಷಾಂತ್ಯದಲ್ಲೇ ತೆಗೆಯುವ ಯೋಚನೆ ಮಾಡಿ.

ಹೀಗೆ ಹೇಳೋದಕ್ಕೂ ಕಾರಣವಿದೆ. 2010ರಲ್ಲಿ ಕಾರುಗಳ ಬೆಲೆ ಎರಡು ಹಂತದಲ್ಲಿ ಏರಿಕೆಯಾಗಲಿದೆ. ಮೊದಲ ಹಂತದ ಬೆಲೆ ಏರಿಕೆ ಜನವರಿಯಲ್ಲಾದರೆ, ಎರಡನೇ ಹಂತದ ಏರಿಕೆ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಹಾಗಾಗಿ, ಬಹುತೇಕ ಕಾರು ಕಂಪನಿಗಳು ಡಿಸೆಂಬರ್ ಅಂತ್ಯದಲ್ಲಿ ಕಾರು ಕೊಳ್ಳುವಿಕೆಯನ್ನು ಹೆಚ್ಚಿಸಲು ವಿಶೇಷ ರಿಯಾಯಿತಿ ಕೊಡುಗೆಗಳನ್ನೂ ನೀಡಲಿವೆ. ಹಾಗಾಗಿ ಕಾರು ಕೊಳ್ಳಬೇಕೆಂದುಕೊಂಡವರು ಕಾರು ಕೊಳ್ಳಲು ಡಿಸೆಂಬರ್ ತಿಂಗಳು ಸಕಾಲ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಮೂಲಗಳ ಪ್ರಕಾರ ಜನವರಿ ತಿಂಗಳಲ್ಲಿ ಕಾರುಗಳ ಬೆಲೆಯಲ್ಲಿ ಶೇ.5ರಿಂದ 10ರಷ್ಟು ಏರಿಕೆಯಾಗಲಿದೆ. ಆದರೆ ಎರಡನೇ ಹಂತದ ಏರಿಕೆಯ ಸಂಪೂರ್ಣ ಮಾಹಿತಿಗಳು ಲಭ್ಯವಿಲ್ಲ.

ಕಾರುಗಳ ಬೆಲೆಯಲ್ಲಿ ಏರಿಕೆಯಾಗಲು ಕಾರಣವೂ ಇದೆ. ಪರಿಸರ ಮಾಲಿನ್ಯ ತಡೆಗಾಗಿ ಕಾರುಗಳಲ್ಲಿ ಭಳಸಬೇಕಾಗಿರುವ ಯೂರೋ6ನಿಂದಾಗಿಯೇ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಇದು ಕಾರುಗಳ ಬೆಲೆ ಏರಿಕೆಗೆ ಕುಮ್ಮಕ್ಕು ನೀಡಿದೆ. ಈ ಹೊಸ ಎಂಜಿನ್‌ನ ಭಾಗದ ಬಳಕೆಯಿಂದ ಕಾರುಗಳ ಬೆಲೆ ಸುಮಾರು ಐದು ಸಾವಿರ ರೂಪಾಯಿಗಳಿಂದ 10 ಸಾವಿರ ರೂಪಾಯಿಗಳವರೆಗೂ ಏರಲಿದೆ ಎಂದು ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ