ಗೂಗಲ್ ನಂತ್ರ, ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ನೀಡಲಿರುವ ಫೇಸ್‌ಬುಕ್

ಸೋಮವಾರ, 29 ಆಗಸ್ಟ್ 2016 (16:14 IST)
ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್, ಭಾರತೀಯರಿಗೆ ಉಚಿತ ಇಂಟರ್‌ನೆಟ್ ಸೇವೆ ನೀಡಲು ಮುಂದಾಗಿದೆ. ಕಳೆದ ತಿಂಗಳಷ್ಟೇ ತನ್ನ ಉಚಿತ ಬೇಸಿಕ್ಸ್ ಪ್ರೋಗ್ರಾಮ್ ವಿರುದ್ಧ ತೀವ್ರ ಟೀಕೆಗಳನ್ನು ಎದುರಿಸಿದ್ದ ಫೇಸ್‌ಬುಕ್, ಇದೀಗ ಭಾರತೀಯ ರೈಲ್ವೆಗೆ ಉಚಿತ ವೈ-ಫೈ ಸೇವೆಯನ್ನು ನೀಡುವ ಬಯಕೆ ವ್ಯಕ್ತಪಡಿಸಿದೆ.
ರೈಲ್‌ಟೆಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಆರ್‌.ಕೆ.ಬಹುಗುಣ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶಾದ್ಯಂತ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಒದಗಿಸಲು ಫೇಸ್‌ಬುಕ್ ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
 
ಈಗಾಗಲೇ ಭಾರತೀಯ ರೈಲ್ವೆ, ಗೂಗಲ್‌ನೊಂದಿಗೆ ಕೈಜೋಡಿಸಿ ದೇಶದ 19 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಯನ್ನು ನೀಡುತ್ತಿದೆ. ಪ್ರಸಕ್ತ ಸಾಲಿನ ಅಂತ್ಯದೊಳಗಾಗಿ ಕನಿಷ್ಟ ನೂರು ಭಾರತೀಯ ರೈಲು ನಿಲ್ದಾಣಗಳಲ್ಲಿ ವೈ-ಫೈ ಸೇವೆಯನ್ನು ಅಳವಡಿಸುವ ಗುರಿಯನ್ನು ಗೂಗಲ್ ಹೊಂದಿದೆ.
 
ಫೇಸ್‌ಬುಕ್, ಡ್ರೋನ್‌ಗಳ ಮೂಲಕ ಇಂಟರ್‌ನೆಟ್ ಸಂಪರ್ಕ ತರಲು ಯೋಜನೆ ರೂಪಿಸುತ್ತಿದೆ. ಆದರೆ, ಗೂಗಲ್ ದೊಡ್ಡ ಬಲೂನ್‌ಗಳ ಮೂಲಕ ಇಂಟರ್‌ನೆಟ್ ಸಂಪರ್ಕ್ ತರಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.
 
ಆದಾಗ್ಯೂ, ಫೇಸ್‌ಬುಕ್, ಕೇವಲ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ನೀಡುವುದಲ್ಲದೇ ರೈಲ್‌ಟೆಲ್‌ನೊಂದಿಗೆ ಸಹಭಾಗಿತ್ವವನ್ನು ವಿಸ್ತರಿಸಿಕೊಂಡು ಗ್ರಾಮಗಳಲ್ಲಿ ಕೂಡಾ ಉಚಿತ ವೈ-ಫೈ ಸೌಲಭ್ಯ ಒದಗಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ