4ಜಿ ಸೇವೆಗಾಗಿ ಕೈ ಜೋಡಿಸಿದ ಅಂಬಾನಿ ಸಹೋದರರು

ಗುರುವಾರ, 1 ಅಕ್ಟೋಬರ್ 2015 (17:05 IST)
ವರ್ಷಾಂತ್ಯಕ್ಕೆ 4ಜಿ ಸೇವೆಯನ್ನು ಮಾರುಕಟ್ಟೆಗೆ ಪರಿಚಯಿಸಲು ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ತಮ್ಮ ಹಿರಿಯ ಸಹೋದರ ಮುಕೇಶ್ ಅಂಬಾನಿಯೊಂದಿಗೆ ಕೈ ಜೋಡಿಸಿದ್ದಾರೆ.  
 
ದೇಶದ ನಾಲ್ಕನೇ ಬೃಹತ್ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಕಮ್ಯುನಿಕೇಶನ್ಸ್, ಮುಕೇಶ್ ಅಂಬಾನಿಯವರೊಂದಿಗೆ ಕೈ ಜೋಡಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಮುಕೇಶ್ ಅಂಬಾನಿ ಈ ಕುರಿತಂತೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಕಳೆದ 2002ರಲ್ಲಿ ಧೀರುಭಾಯಿ ಅಂಬಾನಿ ಇಹಲೋಕ ತ್ಯಜಿಸಿದ ನಂತರ ಸಹೋದರರಲ್ಲಿನ ಬಿಕ್ಕಟ್ಟಿನಿಂದಾಗಿ ರಿಲಯನ್ಸ್ ಸಾಮ್ರಾಜ್ಯ ಇಬ್ಬಾಗವಾಗಿತ್ತು. ಇದೀಗ ಇಬ್ಬರು ಸಹೋದರರು ಒಂದಾಗಿ 4ಜಿ ಸೇವೆ ಚಾಲನೆಗೆ ಮುಂದಾಗಿರುವುದು ದೇಶದ ಉದ್ಯಮದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ.
 
ಕಂಪೆನಿಯ ಶೇರುದಾರರೊಂದಿಗೆ ಸಂವಾದ ನಡೆಸಿದ ಅನಿಲ್ ಅಂಬಾನಿ, ಸಿಸ್ಟಿಮಾ ಶ್ಯಾಮ್ ಟೆಲಿ ಸರ್ವಿಸಸ್ ಸ್ವಾಧೀನ ಕುರಿತಂತೆ ಮಾತುಕತೆ ಹಂತದಲ್ಲಿದೆ. ಒಂದು ವೇಳೆ, ಮಾತುಕತೆ ವಿಫಲವಾದಲ್ಲಿ ಪ್ರತ್ಯೇಕ ಕಂಪೆನಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
 
ಅನಿಲ್ ಅಂಬಾನಿ ಮತ್ತು ಮುಕೇಶ್ ಅಂಬಾನಿ ಸಹೋದರರು ವರ್ಷಾಂತ್ಯಕ್ಕೆ 4ಜಿ ಸೇವೆ ಚಾಲನೆ ನೀಡುವ ಉದ್ದೇಶ ಹೊಂದಿದ್ದಾರೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ