ಆಪಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಾರಾಟದಲ್ಲಿ ಕುಸಿತ

ಬುಧವಾರ, 27 ಏಪ್ರಿಲ್ 2016 (16:16 IST)
ವಾಷಿಂಗ್ಟನ್:  ಐಫೋನ್‌ ಮಾರಾಟದ ಇತಿಹಾಸದಲ್ಲಿ ಮೊದಲ ಬಾರಿಗೆ ಕುಸಿತ ಕಂಡಿದ್ದರಿಂದ 13 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಆಪಲ್ ಕಂಪೆನಿಯ ಆದಾಯದಲ್ಲಿ ಕುಸಿತವಾಗಿದೆ. 
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಆಪಲ್ ಸಂಸ್ಥೆ 13.57 ಬಿಲಿಯನ್ ಡಾಲರ್ ಲಾಭ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ಒಟ್ಟು ಲಾಭದಲ್ಲಿ 22.5 ಪ್ರತಿಶತ ಕುಸಿತ ಕಂಡು 10.52 ಬಿಲಿಯನ್ ಡಾಲರ್ ತಲುಪಿದೆ. ಸಂಸ್ಥೆಯ ಪ್ರತಿ ಶೇರುಗಳ ಬೆಲೆ 1.90 ಡಾಲರ್ ಮೌಲ್ಯಕ್ಕೆ ತಲುಪಿದೆ ಎಂದು ಆಪಲ್ ವರದಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
 
ಏತನ್ಮಧ್ಯೆ, ಆಪಲ್ ಸಂಸ್ಥೆಯ ಒಟ್ಟು ಆದಾಯದಲ್ಲಿ 13 ಪ್ರತಿಶತ ಕುಸಿತ ಕಂಡು 50.55 ಬಿಲಿಯನ್ ಡಾಲರ್ ತಲುಪಿದೆ.
 
ಆಪಲ್ ಪ್ರತಿ ಶೇರುದರ 2 ಡಾಲರ್‌ಗಳಿಗೆ ತಲುಪಲಿದ್ದು, ಆದಾಯ 51.97 ಬಿಲಿಯನ್ ಡಾಲರ್‌ಗಳಿಗೆ ತಲುಪಲಿದೆ ಎನ್ನುವ ತಜ್ಞರ ನಿರೀಕ್ಷೆಗಿಂತ ತ್ರೈಮಾಸಿಕ ಫಲಿತಾಂಶದಲ್ಲಿ ಇಳಿಕೆ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
 
ಆಪಲ್ ಸಂಸ್ಥೆ ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 61.2 ಮಿಲಿಯನ್ ಐಪೋನ್‌ಗಳ ಮಾರಾಟ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 51.2 ಮಿಲಿಯನ್ ಪೋನ್‌ಗಳನ್ನು ಮಾರಾಟ ಮಾಡಿದೆ. 
 
ಮಾರುಕಟ್ಟೆಯಲ್ಲಿ ಮಾರಾಟ ಹೊಂದಿರುವ ಐಪೋನ್‌ಗಳು ಎರಡನೇಯ ತ್ರೈಮಾಸಿಕ ಅವಧಿಯಲ್ಲಿ 65 ಪ್ರತಿಶತ ಆದಾಯವನ್ನು ಪ್ರತಿನಿಧಿಸುತ್ತದೆ.
 
ಆಪಲ್ ಸಂಸ್ಥೆ ಪ್ರಸಕ್ತ ಸಾಲಿನ ಮೂರನೇಯ ತ್ರೈಮಾಸಿಕದಲ್ಲಿ 41 ಬಿಲಿಯನ್ ಡಾಲರ್‌ದಿಂದ 43 ಬಿಲಿಯನ್ ಡಾಲರ್ ಆದಾಯ ಹೊಂದುವ ನಿರೀಕ್ಷೆ ಹೊಂದಿದೆ. 

ವೆಬ್ದುನಿಯಾವನ್ನು ಓದಿ