ಐಎಂಎಫ್ ಸಾಲದ ಕಂತು ಕಟ್ಟದ ಗ್ರೀಸ್ ಅಕ್ಷರಶಃ ದಿವಾಳಿ

ಗುರುವಾರ, 2 ಜುಲೈ 2015 (16:34 IST)
ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಸಾಲದ ಕಂತು ತೀರಿಸಲು ಮಂಗಳವಾರ ವಿಫಲವಾದ ಗ್ರೀಸ್ ಸರ್ಕಾರ ಅಕ್ಷರಶಃ ದಿವಾಳಿಯಾಗಿದೆ. ಪಿಂಚಣಿ ಮತ್ತಿತರ ಬಿಲ್‌ಗಳನ್ನು ನೀಡಲು ಕೂಡ ಗ್ರೀಸ್ ದೇಶ ಹೆಣಗಾಡುತ್ತಿದೆ. 
 
ಗ್ರಾಸ್ ಹಣಕಾಸು ಭವಿಷ್ಯಕ್ಕೆ ಅನಿಶ್ಚಿತತೆಯ ಕಾರ್ಮೋಡ ಕವಿದಿರುವುದರಿಂದ ಐರೋಪ್ಯ ಕೇಂದ್ರೀಯ ಬ್ಯಾಂಕ್ ಹೆಚ್ಚುವರಿ ಹಣವನ್ನು ನೀಡುವ ಯಾವ ಲಕ್ಷಣವನ್ನೂ ತೋರಿಸಿಲ್ಲ. 
 
ಅಥೆನ್ಸ್ ಒಂದು ತಿಂಗಳಲ್ಲಿ ಪಿಂಚಣಿದಾರರಿಗೆ ಹಣ ಪಾವತಿಗೆ ಐಒಯು, ಸ್ಕ್ರಿಪ್‌ಗಳನ್ನು ನೀಡಬಹುದೆಂದು ವಿಶ್ಲೇಷಕರು ಹೇಳಿದ್ದಾರೆ. ಗ್ರೀಸ್ ವಾಸ್ತವವಾಗಿ ದಿವಾಳಿಯಾಗಿದೆ. ಅವರು ಐಎಂಎಫ್‌ಗೆ ಸಾಲದ ಕಂತು ತೀರಿಸಿಲ್ಲ. ಸ್ಥಳೀಯ ಪಿಂಚಣಿಗಳನ್ನು ಸರಿಯಾಗಿ ಪಾವತಿ ಮಾಡುತ್ತಿಲ್ಲ. ಬಾಹ್ಯ ಹಣಕಾಸು ತಕ್ಷಣವೇ ಪಡೆಯುವ ಮಾರ್ಗದ ಬಗ್ಗೆ ಯಾವುದೇ ಚೌಕಟ್ಟು ಇಲ್ಲ ಎಂದು ಯುರೇಶಿಯಾ ಗ್ರೂಪ್‌ನ ಮುಖ್ಯ ಯೂರೋಜೋನ್ ಮತ್ತು ಗ್ರೀಸ್ ವಿಶ್ಲೇಷಕ ಮುಜ್‌ತಾಬಾ ರೆಹಮಾನ್ ತಿಳಿಸಿದ್ದಾರೆ. 
 
ಬ್ಯಾಂಕ್‌ಗಳ ಮೇಲೆ ಹೇರಿದ ಬಂಡವಾಳ ನಿಯಂತ್ರಣಗಳ ಮೂಲಕ ಗ್ರೀಕ್ ಆರ್ಥಿಕತೆಗೆ ಆಮ್ಲಜನಕದ ಪೂರೈಕೆಯನ್ನು ಕ್ರಮೇಣ ಕಡಿತಮಾಡಲಾಗುತ್ತಿದೆ. ಹಣಕಾಸು ರಕ್ಷಣೆಗೆ ಎಟಿಎಂನಿಂದ ಹಣ ಪಡೆಯುವುದನ್ನು ದಿನಕ್ಕೆೇ 60 ಯೂರೋಗಳಿಗೆ ತಗ್ಗಿಸಲಾಗಿದೆ. 
 
ಬ್ಯಾಂಕ್‌ಗಳಲ್ಲಿ ಒಟ್ಟು ಎಷ್ಟು ಹಣವಿದೆಯೆಂದು ದೃಢ ಅಂಕಿಅಂಶಗಳು ಲಭ್ಯವಾಗಿಲ್ಲವಾದರೂ, ಕೆಲವು ಅಂದಾಜುಗಳ ಪ್ರಕಾರ 2 ಶತಕೋಟಿ ಯೂರೋಗಳ ಅಥವಾ 2.2 ಶತಕೋಟಿ ಡಾಲರ್‌ಗಳಿಗಿಂತ ಕಡಿಮೆಯಿದೆ. 
 

ವೆಬ್ದುನಿಯಾವನ್ನು ಓದಿ