ಯುಪಿಎ ಸರ್ಕಾರದ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಬಂದ ಹಣ ಎಲ್ಲಿ ಹೋಯ್ತು: ಮೋದಿ ಪ್ರಶ್ನೆ

ಗುರುವಾರ, 2 ಏಪ್ರಿಲ್ 2015 (14:40 IST)
ಇತ್ತೀಚೆಗೆ ನಡೆದ 2 ಲಕ್ಷ ಕೋಟಿ ರೂ. ಮೌಲ್ಯದ  ಕಲ್ಲಿದ್ದಲು ಹರಾಜು ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿದ್ದು, ಹಿಂದಿನ ಯುಪಿಎ ಸರ್ಕಾರ 204 ಗಣಿಗಳನ್ನು ಹಂಚಿಕೆ ಮಾಡಿದಾಗ ಬಂದ ಹಣ ಎಲ್ಲಿಗೆ ಹೋಯಿತು ಎನ್ನುವುದನ್ನು ವಿವರಿಸುವಂತೆ ಪ್ರಧಾನಿ ಮೋದಿ ಒತ್ತಾಯಿಸಿದರು.
 
ಹರಾಜಿನಿಂದ ಬಂದ ಹಣವು ಕೇಂದ್ರದ ಖಜಾನೆಗೆ ಹೋಗಬಾರದು. ಬದಲಾಗಿ ಒಡಿಶಾ ಸೇರಿದಂತೆ ಸಂಬಂಧಿಸಿದ ರಾಜ್ಯಗಳಿಗೆ ಹೋಗಬೇಕು ಎಂದು ಹೇಳಿದರು. ಸುದೀರ್ಘಾವಧಿಯ ಅಭಿವೃದ್ಧಿ ಯೋಜನೆಗೆ ಗಮನವಹಿಸುವಂತೆಯೂ ಮತ್ತು ದಿಢೀರ್ ಸೌಲಭ್ಯಗಳನ್ನು ನೀಡುವ ಸಣ್ಣ ವಿಷಯಗಳ ಕಡೆ ಗಮನಹರಿಸಬಾರದೆಂದೂ ಮೋದಿ ಹೇಳಿದರು. 
 
 ಒಡಿಶಾ, ಚತ್ತೀಸ್‌ಗಢ, ಜಾರ್ಖಂಡ್ ಮತ್ತು ಪಶ್ಚಿಮಬಂಗಾಳ ಮುಂತಾದ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರಸರ್ಕಾರದ ಪೂರ್ಣ ಬೆಂಬಲದ ಭರವಸೆಯನ್ನು ಮೋದಿ ನೀಡಿದರು. ಒಡಿಯಾದಲ್ಲಿ ರೂರ್ಕೆಲಾ ಉಕ್ಕಿನ ಘಟಕದ 12,00 ಕೋಟಿ ರೂ. ವಿಸ್ತರಣೆ ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸುತ್ತಾ ಮೋದಿ ಮಾತನಾಡುತ್ತಿದ್ದರು. 
204 ಕಲ್ಲಿದ್ದಲು ಗಣಿಗಳನ್ನು ಹಿಂದಿನ ಸರ್ಕಾರ ಹಂಚಿಕೆ ಮಾಡಿದ ಹಣ ಎಲ್ಲಿಹೋಯಿತು ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ  ಪ್ರಶ್ನಿಸಿದರು.

ಪ್ರಸಕ್ತ ಸರ್ಕಾರ ಕೇವಲ 20 ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ 2 ಲಕ್ಷ ಕೋಟಿ ರೂ. ಸಂಗ್ರಹಿಸಲು ಹೇಗೆ ಸಾಧ್ಯವಾಯಿತು ಎಂದು ನಂತರ ಸರ್ಕಾರ ವಿವರಣೆ ನೀಡುತ್ತದೆ ಎಂದು ಹೇಳುತ್ತಾ ನಮ್ಮ ಸರ್ಕಾರ ಪಾರದರ್ಶಕತೆಗೆ ಬದ್ಧವಾಗಿದೆ ಎಂದು ಹೇಳಿದರು. 
 
ಕಲ್ಲಿದ್ದಲು ಈಗ ವಜ್ರವಾಗಿ ಪರಿವರ್ತನೆಯಾಗಿದೆ ಎಂದು ಪ್ರತಿಪಾದಿಸಿದ ಅವರು, ಸುಪ್ರೀಂಕೋರ್ಟ್ ಮುಂಚಿನ 204 ಕಲ್ಲಿದ್ದಲು ಗಣಿಗಳ ಹಂಚಿಕೆಯನ್ನು ರದ್ದುಮಾಡಿದ ಬಳಿಕ ಪ್ರಸಕ್ತ ಸರ್ಕಾರ ಕಲ್ಲಿದ್ದಲು ಗಣಿಗಳ ಹರಾಜನ್ನು ಕೈಗೊಂಡಿತು ಎಂದು ಹೇಳಿದರು. 
 
ಮೊದಲಿಗೆ ಸಿಎಜಿ ವರದಿಯಲ್ಲಿ ಹಿಂದಿನ ಸರ್ಕಾರದ ಕಲ್ಲಿದ್ದಲು ನಿಕ್ಷೇಪದ ಹಂಚಿಕೆಗಳಲ್ಲಿ 1.76 ಲಕ್ಷ  ಕೋಟಿ ಆದಾಯ ನಷ್ಟದ ಬಗ್ಗೆ ತಿಳಿಸಿದ್ದರಿಂದ ತಾವು ಮತ್ತು ಇತರರು ನಂಬಿರಲಿಲ್ಲ.ಈಗ 20 ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ 2 ಲಕ್ಷ ಕೋಟಿ ಸಂಗ್ರಹವಾಗಿದ್ದರಿಂದ ಸಿಎಜಿ ವರದಿಯನ್ನು ನಂಬಲು ಕಾರಣಗಳಿವೆ ಎಂದು ಪ್ರಧಾನಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ