ವಜಾಗೊಂಡ 425 ನೌಕರರಿಗೆ ತಲಾ 1 ಲಕ್ಷ ಪರಿಹಾರಕ್ಕೆ ಕೋರ್ಟ್ ಆದೇಶ

ಶುಕ್ರವಾರ, 6 ಮಾರ್ಚ್ 2015 (12:58 IST)
ಗುರಗಾಂವ್ ಲೇಬರ್ ಕೋರ್ಟ್ ವಾಹನ ತಯಾರಿಕೆ ಸಂಸ್ಥೆ ಮಾರುತಿ ಸುಜುಕಿಗೆ 425 ನೌಕರರಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.  2012ರ ಜುಲೈನಲ್ಲಿ ಕಂಪನಿಯ ಮನೆಸಾರ್ ಘಟಕದಲ್ಲಿ ಸಂಭವಿಸಿದ ಹಿಂಸಾಚಾರದ ನಂತರ ಅವರನ್ನು ವಜಾ ಮಾಡಲಾಗಿತ್ತು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮಾರ್ಚ್ 2ರಂದು ಈ ಆದೇಶ ನೀಡಿದ್ದು, ಮಾರುತಿ ಕಂಪನಿಗೆ ನೌಕರರಿಗೆ ಪರಿಹಾರ ಪಾವತಿ ಮಾಡಲು 4.25 ಕೋಟಿ ರೂ.ಗಳನ್ನು ಠೇವಣಿ ಇಡಬೇಕೆಂದು ಕೋರ್ಟ್ ಆದೇಶಿಸಿದೆ.ಆದೇಶದ ಪ್ರಕಾರ, ಪ್ರತಿಯೊಬ್ಬ ನೌಕರ 85,000 ರೂ.ಗಳನ್ನು ಪರಿಹಾರವಾಗಿ ಪಡೆಯುತ್ತಾರೆ ಮತ್ತು 15,000 ರೂ.ಗಳು ಕೋರ್ಟ್ ವೆಚ್ಚಕ್ಕೆ ಹೋಗುತ್ತದೆ.

ನೌಕರರ ಪರ ವಕೀಲ ರಾಜೇಂದ್ರ ಪಾಠಕ್ ಕಂಪನಿಯು ಕೇವಲ ಅನುಮಾನದ ಮೇಲೆ ನೌಕರರನ್ನು ವಜಾ ಮಾಡಿದೆ ಎಂದು ಆರೋಪಿಸಿದ್ದರು. ಪರಿಹಾರ ಕೊಟ್ಟಿದ್ದು ಒಳ್ಳೆಯದೇ. ಆದರೆ ವಜಾಗೊಂಡ ನೌಕರರಿಗೆ ಉದ್ಯೋಗ ಬೇಕಾಗಿದ್ದು ಕಂಪನಿ ಅವರನ್ನು ಮರುನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ