ಡೀಸೆಲ್ ದರ ಇಳಿಕೆ: ಬಸ್ ಪ್ರಯಾಣ ದರ ಇಳಿಕೆಗೆ ಪ್ರಕ್ರಿಯೆ ಆರಂಭ

ಗುರುವಾರ, 18 ಡಿಸೆಂಬರ್ 2014 (10:27 IST)
ಇನ್ನೆರಡು ದಿನಗಳಲ್ಲಿ ಬಸ್ ಪ್ರಯಾಣದರ ಇಳಿಕೆಯಾಗಲಿದೆ ಎಂದು ವಿಧಾನಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದು ಸ್ಪಷ್ಟನೆ ನೀಡಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ಕುರಿತು ಪ್ರಕ್ರಿಯೆ ಆರಂಭಿಸಿದ್ದಾರೆ. ಶೇಕಡಾವಾರು, ಒಟ್ಟಾರೆ ಪ್ರಯಾಣ ದರ ಇಳಿಸುತ್ತೇವೆ ಎಂದು ರೆಡ್ಡಿ ಹೇಳಿದರು.

ದಾಸರಹಳ್ಳಿ ಶಾಸಕ ಮುನಿರಾಜು ಬಿಎಂಟಿಸಿ ನಷ್ಟದಲ್ಲಿರುವ ಬಗ್ಗೆ ಪ್ರಸ್ತಾಪಿಸಿದಾಗ ರಾಮಲಿಂಗಾ ರೆಡ್ಡಿ ಮೇಲಿನಂತೆ ಉತ್ತರಿಸಿದರು. ಡೀಸೆಲ್ ದರ ಇಳಿಕೆಯಾದ್ದರಿಂದ ಬಸ್ ಪ್ರಯಾಣ ದರವನ್ನು ಕೂಡ ಇಳಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿದ್ದರೂ ಬಸ್ ಪ್ರಯಾಣ ದರ ಇಳಿಸಿರಲಿಲ್ಲ.

ಈಗ ಮತ್ತೆ ಡೀಸೆಲ್ ದರ ಪ್ರತೀ ಲೀಟರ್‌ಗೆ 2 ರೂ. ಇಳಿಮುಖವಾದ್ದರಿಂದ ಬಸ್ ಪ್ರಯಾಣ ದರ ಇಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.  ಕಳೆದ ಮೂರ್ನಾಲ್ಕು ತಿಂಗಳಲ್ಲಿ ಡೀಸೆಲ್ ದರ ಅನೇಕ ಬಾರಿ ಇಳಿಕೆಯಾಗಿದ್ದರೂ ಬಸ್ ಪ್ರಯಾಣ ದರ ಮಾತ್ರ ಇಳಿಸಿರಲಿಲ್ಲ. ಚಾಲಕರ ವೇತನ ಹೆಚ್ಚಳ ಮುಂತಾದ ನೆಪಗಳನ್ನು ನೀಡಿ ಪ್ರಯಾಣ ದರ ಇಳಿಕೆಯಿಂದ ತಪ್ಪಿಸಿಕೊಂಡಿತ್ತು. 

ವೆಬ್ದುನಿಯಾವನ್ನು ಓದಿ