ಬುಲೆಟ್ ರೈಲು ಯೋಜನೆಗೆ ಫ್ರಾನ್ಸ್, ಜರ್ಮನಿ, ಇಟಲಿ, ಚೀನಾ ಕಂಪನಿಗಳ ಸ್ಪರ್ಧೆ

ಬುಧವಾರ, 25 ಮಾರ್ಚ್ 2015 (15:39 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೆಚ್ಚಿನ ಡೈಮಂಡ್ ಕ್ವಾಡ್ರಿಲಾಟರಲ್  ಬುಲೆಟ್ ರೈಲು ಯೋಜನೆಯ ಭಾಗವಾಗಲು  ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಚೀನಾ ಸೇರಿದಂತೆ 6 ರಾಷ್ಟ್ರಗಳಿಗೆ ಸೇರಿದ ಪ್ರತಿಷ್ಠಿತ ಕಂಪನಿಗಳು ಸ್ಪರ್ಧೆಗೆ ಪ್ರವೇಶಿಸಿವೆ.
 
ಅಧಿಕ ವೇಗದ ರೈಲು ಜಾಲದ ಯೋಜನೆಯ ಮೂರು ಕಾರಿಡಾರ್‌ಗಳ ಕಾರ್ಯಸಾಧ್ಯತೆ ಅಧ್ಯಯನ ನಿರ್ವಹಣೆಗೆ 12 ಅಂತಾರಾಷ್ಟ್ರೀಯ ಕಂಪನಿಗಳು ಬಿಡ್ ಮಾಡುತ್ತಿವೆ ಎಂದು ಹಿರಿಯ ರೈಲ್ವೆ ಸಚಿವಾಲದ ಅಧಿಕಾರಿ ತಿಳಿಸಿದ್ದಾರೆ. 
 
ದೆಹಲಿ ಮತ್ತು ಮುಂಬೈ, ಮುಂಬೈ ಮತ್ತು ಚೆನ್ನೈ ಹಾಗೂ ನವದೆಹಲಿ ಮತ್ತು ಕೊಲ್ಕತ್ತಾ ನಡುವೆ ಕಾರ್ಯಸಾಧ್ಯತೆ ಅಧ್ಯಯನವನ್ನು ಕೋರಲಾಗಿತ್ತು.  ಚೀನಾ, ಸಿಯುಯಾನ್, ಜರ್ಮನಿಯ ಡಿಬಿ ಇಂಟರ್‌ನ್ಯಾಷನಲ್, ಫ್ರಾನ್ಸ್ ಸಿಸ್ಟ್ರಾ, ಸ್ಪೇನ್ ಸೆನರ್ ಮತ್ತು ಇಟಲಿಯ ಇಟಾಲ್ಸರ್ ಅಲ್ಲದೇ ಬೆಲ್ಜಿಯಂನ ಒಂದು ಕಂಪನಿ ಸಮೀಕ್ಷೆ ಗುತ್ತಿಗೆಯನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಡ್ ಮಾಡಿದ್ದವು.

ಡೈಮಂಡ್ ಕ್ವಾಡ್ರಿಲಾಟರಲ್ ಯೋಜನೆಯಲ್ಲಿ  ಒಂದು ಕಂಪನಿಗೆ ಒಂದು ಕಾರಿಡಾರ್‌ಗೆ ಮಾತ್ರ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ.ಪ್ರಸ್ತುತ ಸೂಪರ್‌ಫಾಸ್ಟ್ ರಾಜಧಾನಿ ಎಕ್ಸ್‌ಪ್ರೆಸ್ ದೆಹಲಿ ಮತ್ತು ಮುಂಬೈ ನಡುವೆ ದೂರವನ್ನು 16 ಗಂಟೆಗಳಲ್ಲಿ ಕ್ರಮಿಸುತ್ತದೆ. ಅಧಿಕ ವೇಗದ ರೈಲುಗಳ ಆರಂಭದಿಂದ ಪ್ರಯಾಣದ ಅವಧಿ ರಾಜಧಾನಿ ರೈಲು ಪ್ರಯಾಣದ ಅರ್ಧಕ್ಕೆ ಮೊಟಕಾಗುತ್ತದೆ. 

ವೆಬ್ದುನಿಯಾವನ್ನು ಓದಿ